ಹಗಲು      ರಾತ್ರಿ

ಶನಿವಾರ, ಜೂನ್ 17, 2023

ಪದವಿ ಪಯಣ ಮುಗಿದಾಗ...!!

ಎಂಟು ತಿಂಗಳ ಹಿಂದೆ ಡಿಗ್ರಿ ಮುಗಿದಾಗ ಬರೆಯಲು ಹೊರಟ ಲೇಖನವಿದು… ಅರ್ಧ ಬರೆದಿಟ್ಟ ಲೇಖನ..!


ಕಾರಣವೇ ಇಲ್ಲದ ಕಾರಣದಿಂದ ಅನಿಶ್ಚಿತವಾಗಿ ಮುಂದುವರೆಯಿತು…

ಬ್ಲೋಗ್ ಪೋಸ್ಟ್ ಬರೆಯದೆ ತಿಂಗಳು ಎಷ್ಟು ಆಯಿತೆಂದೇ ಸದ್ಯ‌ ನೆನಪಿಲ್ಲ.

ಇಂದು ಯಾಕೋ (ಜೂನ್ 2023) ಏಕಾಂತತೆ ಕಾಡಿದಾಗ ಮತ್ತೆ ಈ ಲೇಖನಕ್ಕೆ ಮರುಜೀವ ಕೊಟ್ಟು ಇಂದೇ ಬ್ಲೋಗಲ್ಲಿ ಪ್ರಕಟಿಸಬೇಕೆಂದ ಒಂದು ಛಲ ಬಂದಿದೆ…

ನನಗೆ ಬ್ಲೋಗ್ ಬರಹ ಬರೆಯುವ ಅಭ್ಯಾಸ ಇತ್ತೆಂದು ತಿಳಿದಿದ್ದ ಒಬ್ಬರು ಲೆಕ್ಚರರು, ನನ್ನ ಡಿಗ್ರಿ ಎಕ್ಸಾಂ ನಂತರ ಒಂದು ಕಾಲೇಜಲ್ಲಿ ಭೇಟಿಯಾದಾಗ ಬ್ಲೋಗ್ ಹೇಗೆ ಸಾಗುತ್ತಿದೆ ಎಂದು ಕೇಳಿದ ಸಂದರ್ಭ ಆಗಾಗ ನೆನಪಾಗುತ್ತಿತ್ತು; ನನ್ನಲ್ಲಿ ನನಗೆ ತೃಪ್ತಿಕರವಾದ ಉತ್ತರವೇ ಇರಲಿಲ್ಲ.

ಪದವಿ ಮುಗಿದ ಬಳಿಕ ಕಚೇರಿ ಅಗತ್ಯಕ್ಕಾಗಿ ಕಾಲೇಜಿನಲ್ಲಿ ನಮ್ಮ ಅನಿರೀಕ್ಷಿತ ಭೇಟಿ...

ನನ್ನ ಆಪ್ತ ಗೆಳಯನೊಬ್ಬನಿಗೆ ಈ ಬರಹ ಬರೆಯುತ್ತಿರುವುದಾಗಿ ಮೊದಲೇ ತಿಳಿಸಿದ್ದೆ. ಈ ಬರಹ ಪೂರ್ಣವಾಗಲಿಲ್ಲ ಎಂಬುದೂ ಅವನಲ್ಲಿ ಹೇಳಿದಾಗ ಅವನು ಅದಕ್ಕೆ ಕಾರಣ ತಿಳಿಸಿದ್ದ. ಅದೇನೆಂದರೆ ಆ ಬರಹದಲ್ಲಿ ಅವನ ಕುರಿತಾದ ವರ್ಣನೆ ತುಂಬಾ ಕಮ್ಮಿ ಆಗಿರಬಹುದು ಅಂತ😁. ನಾನೇನು ಬರೆದಿರುವೆ ಅಂತ ಆತನಿಗೆ ಹೇಳದಿದ್ದರೂ ಕೂಡ ಅವನು ಹೇಳಿದ ವಿಷಯ ನಿಜವಾಗಿಯೂ ಹೌದು…🙂 ಇದೆಲ್ಲಾ ಘಟನೆಗಳು ಆಗಾಗ ಮನಸ್ಸಿಗೆ ನೆನಪಾಗುತ್ತಿತ್ತು. ಏನಾದರೂ ಸರಿ ಈ ಬರಹ ಶೀಘ್ರ ಪೂರ್ಣಗೊಳ್ಳಲೇ ಬೇಕು… ಆದರೆ "ನಾಳೆ ಅದು ನೀಳ…"

—-


ನಮಸ್ತೇ…

ಇದೇ ಅಕ್ಟೋಬರ್ 06 2022 ರಂದು ನನ್ನ ಬಿ.ಎಸ್ಸಿ ಪದವಿಯ ಕೊನೆಯ ಪರೀಕ್ಷೆಯೂ ಮುಗಿಯಿತು‌. ಅಂದರೆ ಆರನೇ ಸೆಮೆಸ್ಟರ್‌ ಕೂಡ ಮುಗಿಯಿತು. ಕಳೆದ ಸಲ ಮೂರನೇ ಸೆಮೆಸ್ಟರ್ ಪರೀಕ್ಷೆ ಮುಗಿದಾಗ 'ಪದವಿ ಪಯಣ ಅರ್ಧ ಹಾದಿ ಕ್ರಮಿಸಿದಾಗ…' ಎಂಬ ಶೀರ್ಷಿಕೆಯಲ್ಲಿ ಒಂದು ಬರಹ ಬರೆದಿದ್ದೆ. ಪದವಿ ಮುಗಿದಾಗ ಆ ಬರಹದ ಮುಂದಿನ ಭಾಗ ಬರೆಯಬೇಕು ಎಂದು ಅಂದೇ ತೀರ್ಮಾನಿಸಿದ್ದೆ… ಅಕ್ಟೋಬರ್‌ 06 ಕ್ಕೆ ಪರೀಕ್ಷೆ ಮುಗಿದ ನಂತರ ಪದವಿ ಶಿಕ್ಷಣದ ಕೊನೆಯ ದಿನಗಳ ಕುರಿತು ಬರೆಯಬೇಕು ಎಂದು ಪ್ರತಿದಿನ ನೆನಪಾಗುತ್ತಿದ್ದರೂ ನಾಳೆ ನಾಳೆಗೆಂದು ಕೆಲಸ ಬಾಕಿಯಾಯ್ತು… ಪರೀಕ್ಷೆ ಮುಗಿದ 15 ದಿನಗಳ ಬಳಿಕ ಇನ್ನೂ ತಡವಾಗಬಾರದು ಅಂತ ಅನಿಸಿತು… ಏನೆಲ್ಲಾ ಬರೆಯಬೇಕು ಅಂತ ಹೊಳೆಯಲಿಲ್ಲ. ಪದವಿ ದಿನಗಳ ಸ್ಮರಣೆಗಳು ಈ ಕಿರು ಅವಧಿಯಲ್ಲೇ ಕ್ರಮರಹಿತವಾಗಿದೆ ಅಂತ ಈಗ ಗೊತ್ತಾಯ್ತು… ಬರಹ ಸ್ವಲ್ಪ ಆದರೂ ಕ್ರಮಬದ್ಧವಾಗಿ ಇಲ್ಲದಿದ್ದರೆ ಹೇಗೆ… ಹೆಚ್ಚು ಯೋಚನೆ ಮಾಡದೆ ಗುರುವಿನ ಮೊರೆ ಹೋದೆ… ಆ ಗುರು ಎಲ್ಲವನ್ನೂ ಕ್ರಮಬದ್ಧವಾಗಿ ದಾಖಲಿಸಿದ್ದ‌… ಆ ಗುರು ನನ್ನ ವಾಟ್ಸಪ್ ಖಾತೆ..! ದಾಖಲೆಗಳು ಅದರಲ್ಲಿ ಇದ್ದ ವಾಟ್ಸಪ್ ಚಾಟ್‌ಗಳು… ಕುರುಹುಗಳನ್ನು ಹುಡುಕುವ ಓರ್ವ ದಕ್ಷ ಪೋಲೀಸ್ ಅಧಿಕಾರಿಯ ಏಕಾಗ್ರತೆಯಿಂದ ನನ್ನ ಕ್ಲಾಸ್‌ನ ವಾಟ್ಸಪ್ ಗ್ರೂಪ್ ಇಡೀ ಪರಿಶೀಲಿಸಿದೆ. ತಿಂಗಳುಗಳ ಹಿಂದಿನ ಹಲವಾರು ಸ್ವಾರಸ್ಯಕರ ಘಟನೆಗಳು ಮನದ ಪರದೆಯಲ್ಲಿ ಮೂಡಲಾರಂಭಿಸಿತು… ಅನುಭವಗಳು ಕಹಿ, ಆದರೆ ಅದರ ನೆನಪು ಸಿಹಿ ಅಂತ ಹೇಳ್ತಾರೆ ಅಲ. ನನ್ನ ಮಟ್ಟಿಗೆ ನಿಮ್ಮ ಹಾಗೆ ದೊಡ್ಡ ದೊಡ್ಡ ಕಹಿ ಅನುಭವಗಳು ಇಲ್ಲದಿದ್ದರೂ…😜 ಸಿಹಿ ಅನುಭವಗಳ ಸ್ಮರಣೆ ಇನ್ನೆಷ್ಟು ಸಿಹಿ ಸಿಹಿಯಾಗಿರಬಹುದು ಅಲ…


ಹೆಚ್ಚು ಉದ್ದ ಎಳೆಯುದಿಲ್ಲ… ನೇರ ವಿಷಯಕ್ಕೆ ಬರುತ್ತಿದ್ದೇನೆ‌‌‌…

ಕಳೆದ ಬರಹ ಬರೆದ ದಿನಗಳಲ್ಲಿ ಕನ್ನಾಡಿತೋಡು - ಕಣಕ್ಕೂರು - ಕೋಲ್ಚಾರ್‌ನ ಕಾಡುರಸ್ತೆಯ ಶೋಚನೀಯ ಸ್ಥಿತಿಯ ಬಗ್ಗೆ ಬರೆದಿದ್ದೆ‌‌‌… ಆದರೆ ಐದನೇ ಸೆಮೆಸ್ಟರ್‌ನ ಅವಧಿಯಲ್ಲಿ ಆ ರಸ್ತೆಗೆ ಅನುದಾನ ಬಂದು ಅಗಲೀಕರಣ ಮತ್ತು ಮರುಡಾಮರೀಕರಣ ಕೆಲಸ ನಡೆಯಿತು. ಒಂದನೇ ಹಂತದ ಡಾಮರೀಕರಣ ನಡೆಯುತ್ತಿದ್ದ ಹಾಗೆ ಮಳೆಯೂ ಬಂದು ಸರಿ ಮಾಡಿದ ರಸ್ತೆ ಸದ್ಯ ಹಿಂದಿಗಿಂತಲೂ ಶೋಚನೀಯವಾಗುತ್ತಾ ಇದೆ.


ಮೂರನೇ ಸೆಮೆಸ್ಟರ್ ಪರೀಕ್ಷೆ ಎಲ್ಲಾ ಮುಗಿದು ನಾಲ್ಕನೇ ಸೆಮೆಸ್ಟರ್‌ನ ಭೌತಿಕ ತರಗತಿ ಶುರುವಾಗುವ ಮಧ್ಯೆ 2021 ಅಕ್ಟೋಬರ್ 26 ರಿಂದ ನವೆಂಬರ್ 04 ರವರೆಗೆ ಆಳ್ವಾಸ್‌ನಲ್ಲಿ CATC ಕ್ಯಾಂಪಿಗೆ ಹೋಗಿ ಬಂದಿದ್ದೆ‌. ಆ ಕ್ಯಾಂಪಿನ ಅನುಭವಗಳ ಕುರಿತು ಮಾತ್ರ ವಿಸ್ತೃತ ಬರಹ ಈ ಹಿಂದೆಯೇ ಈ ಬ್ಲಾಗಲ್ಲಿ ಪ್ರಕಟಿಸಿದ್ದೇನೆ. ಹೀಗಿರುವಾಗ ಈ ಹಿಂದೆ ಮೂರನೇ ಸೆಮೆಸ್ಟರ್ ಪರೀಕ್ಷೆ ನಡೆಯುತ್ತಿದ್ದಾಗ ಹಬ್ಬುತ್ತಿದ್ದ ಗಾಳಿಸುದ್ದಿಯೊಂದಕ್ಕೆ ಸತ್ಯವಾಯಿತು; ವಿಶ್ವವಿದ್ಯಾಲಯವು ನಮ್ಮ ನಾಲ್ಕನೇ ಸೆಮೆಸ್ಟರ್‌ಗೆ, ಸೆಮೆಸ್ಟರ್ ಪರೀಕ್ಷೆ ಇಲ್ಲದೆ ನಮ್ಮನ್ನು ಐದನೇ ಸೆಮೆಸ್ಟರ್‌ಗೆ ಕಳುಹಿಸಿತು. ಈ ಹಿಂದಿನ ಬರಹದಲ್ಲಿ ಹೇಳಿದಂತೆ Promoted ( ಪಾಸ್ ಮಾಡಿ ಬಿಟ್ರು..! ) ಎಂಬ ಪ್ರಯೋಗವನ್ನು ಖಂಡಿಸುತ್ತೇನೆ…


ಹಾಗೇ ಹೇಗೋ ನಾಲ್ಕನೇ ಸೆಮೆಸ್ಟರ್‌ನ ಆಟ-ಪಾಠಗಳಿಲ್ಲದೆ ಪದವಿ ಶಿಕ್ಷಣದ ಅಂತಿಮ ವರ್ಷಕ್ಕೆ ತಲುಪಿದೆವು.‌.. ಈ ಸಲ ಹೊಸದಾಗಿ ಪ್ರಥಮ ವರ್ಷದ ಪದವಿ ತರಗತಿಗೆ ಸೇರಿದ ನಮ್ನ ಜೂನಿಯರ್‌ಗಳು ಹೊಸ NEP ಬ್ಯಾಚಿನವರು. ಭಾರತ ಸರ್ಕಾರವು ಅನುಮೋದಿಸಿದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಕರ್ನಾಟಕ ಸರಕಾರ ನಿರ್ದೇಶಾನುಸಾರವಾಗಿ ಮಂಗಳೂರು ವಿಶ್ವವಿದ್ಯಾಲಯ ಜ್ಯಾರಿಗೊಳಿಸಿದಾಗ ಅಲ್ಲಿ ನಮ್ಮ ಜೂನಿಯರ್‌ಗಳಿಗೆ NEP ಬ್ಯಾಚ್ ಅಂತ ಹೆಸರಾಯ್ತು.

ನಾವು CBCS ಬ್ಯಾಚಿನ ಮೊದಲಿರು. ನಮ್ಮ ಕೆಳಗಿನ ಈಗಿನ ಸೆಕೆಂಡ್ ಇಯರ್ ಕೂಡ ನಮ್ಮ CBCS ನವರೇ… ಕಾಲೇಜು ಶಿಕ್ಷಣದ ಇತಿಹಾಸದಲ್ಲಿ CBSS, CBCS, NEP ಎಂಬಿವುಗಳು ನಮ್ಮನ್ನು ಗುರುತಿಸುವ ಜಾತಿಸೂಚಕಗಳೆಂದರೆ ತಪ್ಪಾಗದು. ನನ್ನ ಬ್ಯಾಚಂತೂ ಮಧ್ಯಂತರ ಬ್ಯಾಚ್ ಎಂಬ ಗರ್ವ ಇಟ್ಟಕೊಳ್ಳದೆ ಇರುದು ಹೇಗೆ…😡 ಬಹುಶಃ ಯೂನಿವರ್ಸಿಟಿಯ ಇತಿಹಾಸದಲ್ಲೇ ಎರಡು ಸೆಮೆಸ್ಟರ್‌ಗೆ ಯೂನಿವರ್ಸಿಟಿ ಪರೀಕ್ಷೆ ಇಲ್ಲದೆ ಪ್ರಮೋಟ್ ಆದ ಏಕೈಕ ಬ್ಯಾಚ್ ನಮ್ಮದೇ… ಯೂನಿವರ್ಸಿಟಿಗೆ ನಮ್ಮ ಮೇಲಿದ್ದ ಪ್ರೀತಿ ಯಾವುದೇ ಅಜ್ಜಿಗೆ ತನ್ನ ಪಿಳ್ಳಿಯ ಮೇಲಿದ್ದ ಪ್ರೀತಿಯನ್ನು ಮೀರುವಂತದ್ದು ಅಂತ ನಾನು ಹೇಳಬೇಕಾಗಿಲ್ಲ. ಕಾಲವೇ ಇದಕ್ಕೆ ಮೂಕಸಾಕ್ಷಿ. ಆ ಕಾಲ ಮೂಕವಾದ ಕಾರಣ ನಾನು ಈಗ ಇಲ್ಲಿ ಬರೆಯಬೇಕಾಯ್ತು…🐒


ನವೆಂಬರ್ ಮೊದಲ ವಾರದಲ್ಲಿ ಐದನೇ ಸೆಮೆಸ್ಟರ್ ಕ್ಲಾಸ್ ಕೂಡ ಆರಂಭವಾಯಿತು. ಕರೋನದ ಏರಿಳಿತ ಹಾಗೂ ಸ್ವಾಭಾವಿಕವಾಗಿ ಕಳೆದ ಸೆಮೆಸ್ಟರ್‌ಗಳಲ್ಲಿ ನಡೆದಂತೆ ಅವೈಜ್ಞಾನಿಕವಾಗಿ ಕರೋನ ಫಲಿತಾಂಶ ಕಡ್ಡಾಯಗೊಳಿಸುತ್ತಿದ್ದರು‌. ಗಡಿನಾಡ ವಿದ್ಯಾರ್ಥಿಗಳೇ ಅಲ್ಲಿಯೂ ಪರದೇಶಿಗಳಾದರು… ಜಾಸ್ತಿ ವರ್ಣನೆ ಅಗತ್ಯ ಇಲ್ಲ ಅನಿಸ್ತದೆ‌‌‌…🤐


ಕ್ಲಾಸ್ ಆರಂಭದ ದಿನಗಳಲ್ಲಿ ನಮ್ಮ ಎಸ್.ಪಿ ಸರ್, ಅವರ ಆರೋಗ್ಯ ಸಮಸ್ಯೆಯಿಂದ ಕಾಲೇಜಿಗೆ ಬರಲಾಗಲಿಲ್ಲ. ಆದರೂ ಅವರ ಇಚ್ಛಾಶಕ್ತಿಯು, ಧೈರ್ಯದ ಮಾತುಗಳಿಂದ ನಮ್ಮ ಶಿಕ್ಷಣಕ್ಕೆ ದೊಡ್ಡ ಪೆಟ್ಟು ಬಿದ್ದಿಲ್ಲ ಎಂಬುದು ವಾಸ್ತವ. ಎರಡು ತಿಂಗಳ ಒಳಗೆ ಸಂಪೂರ್ಣ ಗುಣಮುಖರಾಗದಿದ್ದರೂ ಕಾಲೇಜಿನತ್ತ ಬಂದರು. ಆಯಾಸವಿದ್ದರೂ ಸಮಯಕ್ಕೆ ಸರಿಯಾಗಿ ಮೇಲಿನ ಮಹಡಿಯ ನಮ್ಮ ಕ್ಲಾಸಿಗೆ ಹತ್ತಿಇಳಿಯುತ್ತಿದ್ದರು. ಲ್ಯಾಬಲ್ಲಿಯೂ ನಮ್ಮ ಕಡೆಗೆ ಆಗಾಗ ಬಂದು ಮಾರ್ಗದರ್ಶನ ಮಾಡ್ತಾ ಇದ್ದರು ಎಂಬುದನ್ನು ಹೇಳದೆ ನಿರ್ವಾಹವಿಲ್ಲ…

2021ರಲ್ಲಿ ನಮ್ಮ ಕಾಲೇಜಿನಲ್ಲಿ ನಡೆಸಿದ ಅರೆಭಾಷೆ ದಿನಾಚರಣೆ ಕಾರ್ಯಕ್ರಮ



ಒಂದೆರಡು ಮಾತು ಎನ್.ಸಿ.ಸಿಯತ್ತ...
ನಮ್ಮ ಎನ್ನೆಂಸಿಯ ಎನ್.ಸಿ.ಸಿ ಕಚೇರಿ

ಐದನೇ ಸೆಮೆಸ್ಟರ್‌ನ ಆರಂಭದ ದಿನಗಳಲ್ಲಿ ನಮ್ಮ ಎನ್.ಸಿ.ಸಿಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿತ್ತು. ಎನ್.ಸಿ.ಸಿಯು ರಾಷ್ಟಮಟ್ಟದಲ್ಲಿ ನೂತನವಾಗಿ ರಚಿಸಿದ ಕೆಡೆಟ್ ಪೋರ್ಟಲ್‌ಗಳಿಗೆ ಕೆಡೆಟ್‌ಗಳಿಂದ ಬರಹಗಳನ್ನು ಅಪ್ ಲೋಡ್ ಮಾಡಿಸುವುದು. ಕೆಡೆಟ್‌ಗಳಿಗೆ ಅಲುಮ್ನಿ ಅಸೋಸಿಯೇಷನ್ ರಿಜಿಸ್ಟರ್ ಮಾಡಲು ಮಾರ್ಗದರ್ಶನ ಮಾಡುವುದು, ಕಾಲೇಜು ಮತ್ತು ಬೆಟಾಲಿಯನ್‌ನ ನಡುವೆ ಮಾಹಿತಿ ವಿನಿಮಯ ಹೀಗೆ ಅಂತಿಮ ವರ್ಷದ ಕೆಡೆಟ್‍ಗಳು ಒಂದಲ್ಲ ಒಂದು ಕೆಲಸದಲ್ಲಿ ತಲ್ಲೀನರಾಗಿರುತ್ತಿದ್ದರು. ಹೀಗಿರುವಾಗ ಕಾಲೇಜಿನಿಂದ ಕೆಲವು ದಾಖಲೆಯನ್ನು ಮಡಿಕೇರಿ ಬೆಟಾಲಿಯನ್‌ಗೆ ಅನಿವಾರ್ಯವಾಗಿ ಕಳಿಸಿಕೊಡುವ ಕೆಲಸ ನಾನು ಮಾಡಬೇಕಾಯಿತು. ಸಾಮಾನ್ಯವಾಗಿ ಮಡಿಕೇರಿ ಬಸ್ ಡ್ರೈವರ್‌ ಮೂಲಕ ಕಳಿಸುವುದು ಹಾಗೂ ಬಸ್ ನಂಬರ್ ಸಹಿತ ಬೆಟಾಲಿಯನ್‌ಗೆ ವರದಿ ಮಾಡುವುದು ನಮ್ಮ ಅಭ್ಯಾಸ. ಈ ಹಿಂದೆಯೂ ಇದೇ ಕೆಲಸ ಯಶಸ್ವಿಯಾಗಿ ನಾನು ಮಾಡಿದ್ದೆ ಕೂಡ. ಆದರೆ ಈ ಬಾರಿ ಬಸ್‌ನಲ್ಲಿ ಕಳಿಸುವ ಮೊದಲು ನಾನು ಬೆಟಾಲಿಯನ್‌ನ ಸಾಬ್‌ಗೆ ಫೋನ್ ಮಾಡಿ ನಾನು ಫೋನ್ ಮಾಡಿದ ಉದ್ದೇಶವನ್ನು ನನಗೆ ಬರುತ್ತಿದ್ದ ಅರೆ ಬರೆ ಹಿಂದಿಯಲ್ಲಿ ತಿಳಿಸಿದೆ. ಪುಣ್ಯಕ್ಕೆ ಅವರಿಗೆ ವಿಷಯ ಅರ್ಥ ಆಯ್ತು. ಆದರೆ ಈ ಹಿಂದಿನ ಅನುಭವಕ್ಕಿಂತ ಭಿನ್ನವಾಗಿ ಅವರು ಏನೆಲ್ಲೋ ಉದ್ದಕ್ಕೆ ಹೇಳ್ತಾ ಹೋದರು. ನಂಗೆ ನಿಜವಾಗಿ ಅರ್ಥ ಆಗಲಿಲ್ಲ. ಕಾಲೇಜಲ್ಲಿ ನಮ್ಮ ಹಿಂದಿ ಸರ್‌ನನ್ನು ಹುಡುಕಿದೆ. ಅವರು ಸಿಗಲಿಲ್ಲ. ಬೆಟಾಲಿಯನ್‌ಗೆ ಕಳಿಸಬೇಕಾದ ದಾಖಲೆಗಳೆಲ್ಲಾ ಜೋಡಿಸಿಟ್ಟಿರುವೆ ಎಂಬುದು ಮಾತ್ರ ಖಚಿತವಾಯ್ತು. ಕಳಿಸುದರ ಬಗ್ಗೆ ಏನೋ ಹೇಳಿದ್ದು ಅರ್ಥ ಆಗದೆ ತಲೆ ಕೆದಕಿದೆ. ಆಗ ನಾನು ನಮ್ಮ ಆರ್ಯರ್ವೇದ ಮೆಡಿಕಲ್ ಕಾಲೇಜ್‌ನಲ್ಲಿ ಇದ್ದೆ. ಫೋನ್ ಕಟ್ ಮಾಡಿ ಸೀದ ಅಲ್ಲೇ ಇದ್ದ ಒಬ್ಬರು BAMS ವಿದ್ಯಾರ್ಥಿಯಲ್ಲಿ ಒಂದು ಕನ್ನಡ ವಾಕ್ಯವನ್ನು ಕನ್ನಡದಿಂದ ಹಿಂದಿಗೆ ಅನುವಾದ ಮಾಡಿಕೊಡಲು ಕೇಳಿದೆ‌‌. ಅವರು ಹೇಳಿಕೊಟ್ಟರು‌.‌ ಅದನ್ನು ಎರಡು ಸಲ ಉರು ಹೊಡೆದು ಸಾಬ್‌ಗೆ ಪುನಃ ಫೋನ್ ಮಾಡಿದೆ. ಅವರು ಮಾತು ಶುರು ಮಾಡುವ ಮೊದಲು ನಾ ಹೀಗೆ ಹೇಳಿದೆ… "ಬಸ್ ಮೇಂ ಬೇಜ್ ನೇ ಕೇ ಬಾದ್ ಕೋಲ್ ಕರೂಂಗ" (ಅರ್ಥ : ಬಸ್ಸಲ್ಲಿ ಕಳುಹಿಸಿದ ನಂತರ ಫೋನ್ ಮಾಡ್ತೇನೆ). ಅಷ್ಟು ಹೇಳಿ ಅವರ ಪ್ರತಿಕ್ರಿಯೆಗೆ ಕಾಯದೆ ಫೋನ್ ಕಟ್ ಮಾಡಿದೆ. ಸಮಯ ತಡವಾಗುತ್ತಿದೆ ಅಂತ ಸೀದ ಬಸ್ ಸ್ಟಾಂಡ್‌ಗೆ ಹೋಗಿ ಹೇಗೋ ಬಸ್ ಮೂಲಕ ದಾಖಲೆಗಳನ್ನು ಭದ್ರವಾಗಿ ಕಳುಹಿಸಿದೆ‌. ಕೂಡಲೇ ಬಸ್‌ನ ಫೋಟೋ ಹಾಗೂ ಡ್ರೈವರ್‌ನ ನಂಬರ್ ಸಾಬ್‌‌ಗೆ ವಾಟ್ಸಪ್ ಮಾಡಿದೆ‌. ಸ್ವಲ್ಪ ಹೊತ್ತಲ್ಲಿ ವಾಪಾಸು ಸಾಬ್‌ನ ಫೋನ್ ಕರೆಯೊಂದು ಬಂತು. ಏನೋ ಎಡವಟ್ಟಾಗಿದೆ ಎಂಬದನರಿತ ಸಾಬ್‌‌ ಕನ್ನಡ ಬಲ್ಲವರಾದ ಇನ್ನೊಬ್ಬರ ಮೂಲಕ ನನ್ನೊಂದಿಗೆ ಮಾತಾನಡಿದರು. ಇಂದು ಮಡಿಕೇರಿ ಬಸ್‌ಸ್ಟಾಂಡ್‌ನಿಂದ ದಾಖಲೆಗಳನ್ನು ತಕೊಳಲು ಆಗುದಿಲ್ಲ. ನಾಳೆ ಸುಳ್ಯಕ್ಕೆ ಅವರು ಬರ್ತಾರೆ. ಹಾಗಾಗಿ ನಾಳೆ ಹತ್ತು ಗಂಟೆಗೆ ಸುಳ್ಯ ಬಸ್‌ನಿಲ್ದಾಣಕ್ಕೆ ಬನ್ನಿ ಅಂತ ಹೇಳಿದರು… ನಾನು ಈಗಾಗಲೇ ಬಸ್ಸಲ್ಲಿ ಕಳಿಸಿ ಆಗಿದೆ ಎಂಬುದಕ್ಕೆ ಅವರ ಪ್ರತಿಕ್ರಿಯೆ… ದೇವಾ‌‌… ನಾನು ಅವರ ಕಣ್ಣೆದರು ಸಿಗ್ತಾ ಇದ್ದರೆ ಏನಾಗ್ತಾ ಇದ್ದೆನೋ… ಗೊತ್ತಿಲ್ಲ. ಎಡವಟ್ಟಾಯ್ತು ಅಂತ ನನಗೆ ಗೊತ್ತಾಯ್ತು. ಕೂಡಲೇ ನಮ್ಮ ಸರ್‌ನನ್ನು ಸಂಪರ್ಕಿಸಿ ಹೇಗೆಲ್ಲೋ ಬಸ್ಸಲ್ಲಿ ಕಳಿಸಿದ ದಾಖಲೆ ಭದ್ರವಾಗಿ ಸಾಬ್‌ನ ಕೈ ಸೇರಿತು. ಸುಮಾರು ಎರಡು ತಿಂಗಳ ನಂತರ ನಾವು ಕೆಲವರು ಬಿ ಸರ್ಟಿಫಿಕೇಟ್ ಸೈನ್ ಮಾಡಲು ಬೆಟಾಲಿಯನ್‌ಗೆ ಹೋಗಿದ್ದೆವು‌. ಅಷ್ಟರಲ್ಲಿ ಎನ್ನೆಂಸಿ ಮಕ್ಕಳು ಬಂದಿದ್ದಾರೆ ಅಂತ ತಿಳಿದ ಸಾಬ್ ನಿಮ್ಮಲ್ಲಿ ಅಭಿಜಿತ್ ಯಾರು ಅಂಥ ಕೇಳಿದರು. ನಾನು ಅವರೆಡೆಗೆ ಹೋದಾಗ ಅವರ ಯೂನಿಫಾರ್ಮಲ್ಲಿ ಇದ್ದ ಹೆಸರು ನೋಡಿದೆ. ಆಗ ತಿಳಿಯಿತು ಇವರು ಅವರೇ. ಅದೇ ಸಾಬ್ ಅಂತ. ಕೂಡಲೇ ಅವರು ಅಲ್ಲಿದ್ದ ಇತರ ಸಾಬ್‌ಗಳೊಡನೆ ಚುಟುಕಾಗಿ ನನ್ನ ತೋರಿಸಿ ನನ್ನ ಹೆಡ್ಡತನವನ್ನು ಹೇಳಿ ನಗಾಡಿದರು. ನಂಗೂ ನಗು ಬಂತು. ಕೂಡಲೇ ನಾನು "ಮಾಫ್ ಕೀ ಜಿಯೇ ಸಾಬ್, ಮೇಂಕೋ ಹಿಂದಿ ನಹೀ ಸಮಜ್‌ತಾ ಹೇ…" ಇತ್ಯಾದಿ ಏನೋ ಪಠಪಠ ಅಂಥ ಉತ್ತರಿಸಿದೆ. ಕೂಡಲೇ ಅವರು ಇಷ್ಟು ಚಂದ ಹಿಂದಿಯಲ್ಲಿ ಹಿಂದಿ ಬರುದಿಲ್ಲ ಅಂತ ಹೇಳ್ತಿಯಲ ಅಂತ ಹೇಳಿದರು. ಅದಕ್ಕೆ ನನ್ನಲ್ಲಿ ಉತ್ತರವಿರಲಿಲ್ಲ… ನಗು ಮಾತ್ರ…😂 ಅಗತ್ಯಕ್ಕೆ ಆ ಹಿಂದಿ ಕೈ ಹಿಡಿಯಲಿಲ್ಲ. ಅನಗತ್ಯಕ್ಕೆ ಕೈ ಬಿಡಲೂ ಇಲ್ಲ‌… ನಂತರದ ಕೆಲವು ವಿಶೇಷ ದಿನಗಳಲ್ಲಿ ಆ ಸಾಬ್ ವಾಟ್ಸಪ್ ಮೂಲಕ ಶುಭಸಂದೇಶಗಳನ್ನು ಕಳಿಸುತ್ತಿದ್ದರು. ಅವರು ಬೇರೆ ಬೆಟಾಲಿಯ‌ನ್‌ಗೆ ವರ್ಗಾವಣೆಗೊಂಡ ನಂತರ ಮತ್ತೆ ಅವರ ಸುದ್ದಿ ಸಿಗಲಿಲ್ಲ…

ಅಭಿಷೇಕ್‌ನ ಸಾಧನೆಯ ಗೌರವಾರ್ಥವಾಗಿ ಕಾಲೇಜಿನ ಎದುರು ಶುಭಾಶಯ ಫಲಕ ಸ್ಥಾಪಿಸಿದಾಗ

ಈ ಕಾಲದಲ್ಲಿ ನಮ್ಮ ಅಭಿಷೇಕ್ ಆಳ್ವಾಸ್‌ನ ಮೂರು ಕ್ಯಾಂಪ್ ಯಶಸ್ವಿಯಾಗಿ ಮುಗಿಸಿ ಬೆಂಗಳೂರಿನ ಕ್ಯಾಂಪ್‌ಗೆ ಆಯ್ಕೆ ಆದ. ಅಲ್ಲೂ ಎರಡು ಕ್ಯಾಂಪ್ ಯಶಸ್ವಿಯಾಗಿ ಮುಗಿಸಿ ಕರ್ನಾಟಕ ಮತ್ತು ಗೋವಾದ ಮೂಲಕ ನವದೆಹಲಿಯ ಪ್ರತಿಷ್ಠಿತ ಗಣರಾಜ್ಯ ದಿನೋತ್ಸವ ಕ್ಯಾಂಪ್‌ಗೆ ಆಯ್ಕೆಯಾದನು. ಮನೆಯನ್ನೂ ಕಾಲೇಜನ್ನೂ ಬಿಟ್ಟು ಸರಾಸರಿ ನೂರು ದಿನಗಳನ್ನು ಕ್ಯಾಂಪಲ್ಲಿ ಕರೋನದ ಸವಾಲುಗಳ ನಡುವೆ ಅವನು ಅವನ ಗುರಿಯನ್ನು ಸಾಧಿಸಿದ. ಅವನ ವಿಜಯಯಾತ್ರೆಯ ಎಲ್ಲಾ ಪ್ರಮುಖ ಹೆಜ್ಜೆಗಳನ್ನು ಪ್ರತ್ಯಕ್ಷವಾಗಿ ನೋಡದಿದ್ದರೂ ಅವನ ಕಣ್ಣುಗಳ ಮೂಲಕ ನಾನು ನೋಡಿದ್ದೆ. ಅವನ ಶಬ್ದದಲ್ಲಿ ಕೇಳುವ ಅವಕಾಶ ನನಗೆ ಸಿಗುತಿತ್ತು. ಬಹುಶಃ ಅದು ಈಗಲೂ ನಾನೇ ಸ್ವತಃ ದೆಹಲಿಗೆ ಹೋಗಿ ಬಂದ ಹಾಗೆ ನನ್ನ ಸ್ಮರಣೆಯಲ್ಲಿ ಉಳಿದಿದೆ. ಅಲ್ಲಿನ ಅವನ ಅನುಭವಗಳು ನನ್ನದೇ ಎಂಬುದರಲ್ಲಿ ನನಗೆ ಸಂಶಯವಿಲ್ಲ‌.

ಎಲ್ಲಾ ದೈವ ಇಚ್ಛೆ…

ಕವಿ ಭಾಷೆಯನ್ನು ಕಸಿದು ಹೇಳುವುದಾದರೆ… "ಆ ವಿಧಾತ ಬದುಕೆಂಬ ಬಟ್ಟೆಯನ್ನು ಎಷ್ಟು ಸುಂದರವಾಗಿ ನೇಯ್ದಿರುತ್ತಾನೆ."

ಅರೆಭಾಷೆಯಲ್ಲಿ ಹೇಳುದಾದರೆ… "ಮಾತಾಡಿಕೆ ಹೋದ್‌ರೆ ಎಲ್ಲಂವು ನಮ್ಮ ಹಕ್ಕಲೆನ ನೆಂಟ್ರ್‌ಗ…😅"


ಎನ್.ಸಿ.ಸಿ ವ್ಯಕ್ತಿತ್ವವನ್ನು ನಿರ್ಮಿಸಿತ್ತದೆಯೋ ಅಂತ ಗೊತ್ತಿಲ್ಲ. ಆದರೆ ಎನ್.ಸಿ.ಸಿಯು ನಮ್ಮ ವ್ಯಕ್ತಿತ್ವಕ್ಕೆ ಉತ್ತಮ ಅಡಿಪಾಯವನ್ನು ಹಾಕುತ್ತದೆ ಅಂತ ನನ್ನ ಅನುಭವಕ್ಕೆ ಬಂದಿದೆ‌. ಎನ್.ಸಿ.ಸಿಯ ಬಗ್ಗೆ ಮಾತು ಮುಂದುವರಿಸಿದರೆ ಅದಕ್ಕೆ ಅಂತ್ಯ ಸಿಗದು ಎಂಬ ಭಯದಲ್ಲಿ ಸದ್ಯ ಇಲ್ಲಿ ಮುಗಿಸುತ್ತೇನೆ‌. ಇತರೆ ವಿಷಯಗಳ ಪ್ರಸ್ತಾವ ಇನ್ನೂ ಬಾಕಿ ಇದೆ ಅಲ…

ವಾರ್ಷಿಕ ಎನ್‌ಸಿಸಿ ಗ್ರೂಪ್ ಫೋಟೋ
ಗೆಳಯ ಅಭಿಷೇಕ್ ಬಿಡುವಿನ ವೇಳೆಯಲ್ಲಿ ಬಿಡಿಸಿದ ಎನ್ನೆಂಸಿ ಚಿತ್ರ 

ಫ್ರೆಶರ್‌ಸ್ ಡೇ ಹಾಗೂ ಸಯನ್ಸ್ ಫೆಸ್ಟ್

ಹೊಸದಾಗಿ ಬಿ.ಎಸ್ಸಿಗೆ ಸೇರಿದ ವಿದ್ಯಾರ್ಥಿಗಳಿಗೆ ಫ್ರೆಶರ್‌ಸ್ ಡೇ ಮಾಡಬೇಕು ಎಂಬ ಬಯಕೆ ನಮ್ಮ ಕ್ಲಾಸಿನೆಲ್ಲರಲ್ಲೂ ಮೂಡಿತ್ತು. ಕಳೆದ ವರ್ಷ ಕರೋನದಿಂದ ಫ್ರೆಶರ್‌ಸ್ ಡೇ ನಡೆದಿರಲಿಲ್ಲ. ಹಾಗಾಗಿ ಮೊಟಕುಗೊಂಡಿದ್ದೆ ಕಾಲಾವಧಿ ಹಬ್ಬ ಹರಿದಿನಗಳನ್ನು ಮುಂದುವರಿಸುವುದು ನಮ್ಮ ನೈತಿಕ ಜವಾಬ್ದಾರಿಯೂ ಅಲ್ವಾ‌… ನಾವು ಕೆಲವರು ಸೇರಿ ಜಾತಿ-ಮತ-ಭಾಷೆ-ವರ್ಣ-ಪಂತ ಭೇದಗಳಿಲ್ಲದೆ ಅಂತಿಮ ವರ್ಷ ಬಿ.ಎಸ್ಸಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಫ್ರೆಶರ್‌ಸ್ ಡೇಯ ಚರ್ಚೆ ತೀರ್ಮಾನಗಳನ್ನು ಕೈಗೊಂಡೆವು. ಆರಂಭದಲ್ಲಿ ನಾನು ಕಾರ್ಯಕ್ರಮ ಜವಾಬ್ದಾರಿ ತಕೊಂಡಿದ್ದೆ ಕೂಡ. ಆದರೆ ಕಾರ್ಯಕ್ರಮದ ಸಿದ್ಧತೆಗಳು ಅಂತಿಮ ಹಂತಕ್ಕೆ ಬಂದಾಗ ಕೆಲವು ಅಪಸ್ವರಗಳು ಏಳಲಾರಂಭಿಸಿತು. ಕೆಲವು ವಾದಕ್ಕೆ ಪ್ರತಿವಾದಗಳಿಗೇನೂ ಕೊರತೆ ಇಲ್ಲದಿದ್ದರೂ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕಾದರೆ ಯಾರಾದರೂ ತಗ್ಗಿಬಗ್ಗಿ ನಡೆಯಲೇ ಬೇಕು. ಹಾಗಾಗಿ ಭೌತಿಕವಾಗಿ ಕಾರ್ಯಕ್ರಮದ ಜವಾಬ್ದಾರಿಯನ್ನು ನಾನು ಇತರರಿಗೆ ಹಸ್ತಾಂತರಿಸಿದೆ‌. ಆದರೆ ನೈತಿಕವಾಗಿ ಮತ್ತು ಭೌತಿಕವಾಗಿ ಯಾವುದೇ ಅಸಹಕಾರ ಮಾಡಲಿಲ್ಲ‌. ಕಾರ್ಯಕ್ರಮ ನಿರೂಪಣೆಯಲ್ಲಿ ಇತರರಂತೆ ಸಕ್ರೀಯವಾಗಿದ್ದೆ‌. ನವೆಂಬರ್ 25 ಕ್ಕೆ ಕಾರ್ಯಕ್ರಮ ನಾವೆಲ್ಲರೂ ಅಂದುಕೊಂಡದಕ್ಕಿಂತ ಚೆನ್ನಾಗಿಯೇ ನಡೆಯಿತು. ಆದರೆ ಕಪ್ಪು ಚುಕ್ಕೆಯೊಂದು ಕಾರ್ಯಕ್ರಮದ ಕೊನೆಯಲ್ಲಿ ನಡೆದಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಸ್ಪೀಕರ್‌ನ ಶಬ್ದ ಜಾಸ್ತಿ ಆಗ್ತಾ ಹೋಯ್ತು. ಕಾಲೇಜು ಕಚೇರಿಯಿಂದ ಆಗಾಗ ಶಬ್ದ ಕಮ್ಮಿ ಮಾಡು ನಿರ್ದೇಶಗಳು ಬರುತ್ತಾ ಇತ್ತು. ನಾನೇ ಹೋಗಿ ಶಬ್ದ ಕಮ್ಮಿ ಮಾಡಿದರೂ ವಾಪಾಸು ಹೆಚ್ಚುತ್ತಾ ಇತ್ತು…😂 ಕಾರ್ಯಕ್ರಮ ಅಂದವಾದ ಖುಷಿಯಲ್ಲಿ ಎಲ್ಲರೂ ಮೈಮರೆತ್ತಿದ್ದರು… ಆದರೂ ನಮ್ಮ ಕಾರ್ಯಕ್ರಮಕ್ಕೆ ಬೆಂಬಲವಾಗಿದ್ದ ಉಪನ್ಯಾಸಕರು ಇತರರ ಮುಂದೆ ಅಪಹಾಸ್ಯರಾಗದಂತೆ ನೋಡುವ ಜವಾಬ್ದಾರಿ ನಮಗೆ ಇದೆ ಎಂಬುದು ನಮ್ಮ ಗಮನದಲ್ಲಿರಬೇಕಲ…

ಆ ಕಾರ್ಯಕ್ರಮ ನಡೆಯುವಲ್ಲಿ ಉಷಾ ಮೇಡಂನ ಪಾತ್ರ ಖಂಡತ ಮರೆಯುವಂತಿಲ್ಲ. ಕಾರ್ಯಕ್ರಮ ಮುಗಿದ ನಂತರ ಇತರೆ ಡಿಪಾರ್ಟ್ಮೆಂಟ‌ಗಳಿಂದಲೂ ಒಳ್ಳ ಅಭಿಪ್ರಾಯವೇ ಬಂದಿತ್ತು. ಆ ಕಪ್ಪು ಚಕ್ಕೆಯನ್ನು ಕಾರ್ಯಕ್ರಮದ ಬಿಳಿ ಚುಕ್ಕೆ ಮರೆ ಮಾಡಿತ್ತು‌.


ಮುಂದಿನ ದಿನಗಳಲ್ಲಿ ಸಯನ್ಸ್ ಅಸೋಸಿಯೇಷನ್ ವತಿಯಿಂದ ಸಯನ್ಸ್ ಫೆಸ್ಟ್ ನಡೆಯಿತು


ಹಿರಿಯ ವಿದ್ಯಾರ್ಥಿನಿ ಜೊತೆ ಸಂವಾದ ಹಾಗೂ ರಸಪ್ರಶ್ನೆ ಕಾರ್ಯಕ್ರಮ

ನಮ್ಮ ಸೀನಿಯರ್ ಆಶ್ರೀತಾ ಅಕ್ಕನಿಗೆ ಮಂಗಳೂರು ವಿಶ್ವವಿದ್ಯಾನಿಲಯದ 2020-21 ನೇ ಸಾಲಿನ ಪದವಿ ಪರೀಕ್ಷೆಯಲ್ಲಿ ಎಂಟನೇ ರ‌್ಯಾಂಕ್ ಬಂದ ಸಂಭ್ರಮದಲ್ಲಿ ನಾವು


ವಿಧ್ಯಾರ್ಥಿ ಸಂಘದತ್ತ...

ಡಿಸೆಂಬರ್‌ನಲ್ಲಿ ಕಾಲೇಜು ವಿದ್ಯಾರ್ಥಿ ಸಂಘದ ಆಯ್ಕೆ ನಡೆಯಿತು. ಅದಕ್ಕಾಗಿ ತರಗತಿಯಿಂದ ಹುಡಗರಿಂದ ಮತ್ತು ಹುಡುಗಿಯರಿಂದ ಒಬ್ಬೊಬ್ಬ ಪ್ರತಿನಿಧಿಗಳ ಆಯ್ಕೆ ಆಗಬೇಕಿತ್ತು. ನಾನು ಒಂದನೇ ವರ್ಷದಲ್ಲಿ ನಾನು ಮತ್ತು ಎರಡನೇ ವರ್ಷದಲ್ಲಿ ಆದೇಶ ಹುಡುಗರ ಪ್ರತಿನಿಧಿಯಾಗಿದ್ದ. ಈ ಬಾರಿ ಯಾರು ಎಂಬುದು ಚರ್ಚೆಯಾಯ್ತು. ನಮ್ಮ ಕ್ಲಾಸಿನೊಳಗೆ PMC/Cs & BZC ಎಂಬ ಎರಡು ಸೆಕ್ಷನ್ ಇರುವುದರಿಂದ ಎರಡು ಸೆಕ್ಷನ್‌ಗಳಿಂದ ಒಬ್ಬೊಬ್ಬರನ್ನು ಆಯ್ಕೆ ಮಾಡುವುದು ಸಾಮಾನ್ಯ ವಾಡಿಕೆ. ಕಳೆದ ಎರಡು ವರ್ಷ PCM ನ ಹುಡುಗರು ಹಾಗೂ BZC ಹುಡುಗಿಯರು ತರಗತಿ ಪ್ರತಿನಿಧಿ ಆಗಿರುವುದರಿಂದ ಈ ಬಾರಿ PCM ನಿಂದ ಹುಡುಗಿಯೂ BZC ಯ ಹುಡುಗರಲ್ಲಿ ಯಾರಾದರೂ ಪ್ರತಿನಿಧಿ ಆಗಬೇಕೆಂಬ ಅಭಿಪ್ರಾಯ ನಾನು ಸೂಚಿಸಿದೆ. ಅದನ್ನು ಯಾರೂ ಒಪ್ಪಲಿಲ್ಲ. ಅದರ ಬದಲಿಗೆ ಬೇರೆ ಯಾರೂ ಹುಡುಗರಿಂದ ತರಗತಿ ಪ್ರತಿನಿಧಿಯಾಗಲು ತಯಾರಾಗಲಿಲ್ಲ‌. ಸಾಮಾನ್ಯವಾಗಿ ರಾಜಕೀಯದಲ್ಲಿ ಸ್ಥಾನಮಾನ ಸಿಗಲು ಹೋರಾಟವಾದರೆ ಇಲ್ಲಿ ಸ್ಥಾನಮಾನ ತಪ್ಪಿಸಲು ಹೋರಾಟ ನಡೆಯಿತು. ನಾನು ನನ್ನ ಅಭಿಪ್ರಾಯದಲ್ಲಿ ಮುಂದುವರಿದರೂ ಎಲ್ಲಾ ಲೆಕ್ಚರ್‌ಸ್ ಬಂದು ಕೊನೆಗೆ ಆದೇಶನನ್ನು ಆಯ್ಕೆ ಮಾಡಿದರು. ಅವರು ತಪ್ಪಿಸಿಕೊಳ್ಳಲು ಶತಪ್ರಯತ್ನಮಾಡಲು ಲೆಕ್ಚರ್‌ಗಳಿಗೆ ಎದುರು ಮಾತನಾಡದೆ ಅವ ನಮ್ಮ ಪ್ರತಿನಿಧಿಯಾದ. ನನ್ನ ವಾದದ ತದ್ವಿರುದ್ಧವಾಗಿ ಪ್ರತಿನಿಧಿ ಆಯ್ಕೆ ನಡೆದರೂ ಆಯ್ಕೆ ಆದ ಇಬ್ಬರು ಪ್ರತಿನಿಧಿಗಳ ನಡೆಯಲ್ಲಿ ನನಗೆ ಮೆಚ್ಚುಗೆ ಇತ್ತು. ಆಯ್ಕೆ ಆದ ಮೇಲೆ ಅವರು ನಮ್ಮವರೇ… ಆದೇಶನ ಕೆಲಸಗಳಲ್ಲಿ ನಾನು ನನಗೆ ಸಾಧ್ಯವಾಗುವಂತೆ ಜೊತೆಯಾಗ್ತಾ ಇದ್ದೆ. ಅವನೊಂದಿಗೆ ಆಗಾಗ ಮಕ್ಕಳಾಟದಂತೆ ಮಾತುಕತೆ, ಜಗಳ ಇತ್ಯಾದಿ ಸರ್ವೇ ಸಾಮಾನ್ಯ. ಆದರೂ ನನ್ನ ಮಾತಿನ ಉದ್ದೇಶ ಅವನಿಗೂ ಅವನ ಮಾತಿನ ಉದ್ದೇಶ ನನಗೂ ಅರ್ಥವಾಗುತ್ತಿತ್ತು. ಹಾಗಾಗಿ ಅವ ನನ್ನ ಕೆಲವು ಆಪ್ತ ಗೆಳೆಯರಲ್ಲಿ ಒಬ್ಬನೂ ಆಗಿದ್ದ. ಹುಡುಗಿಯರಿಂದ BZC ಯ ಲಾವಣ್ಯ ಪ್ರತಿನಿಧಿಯಾಗಿ ಆಯ್ಕೆ ಆಗಿದ್ದಳು. ಇಬ್ಬರನ್ನೂ ಕೂಡ ವಿದ್ಯಾರ್ಥಿ ಸಂಘದ ಪ್ರಮುಖ ಸ್ಥಾನಗಳನ್ನು ನಮ್ಮ ಕ್ಲಾಸಿಗೆ ಒಲಿಸಿಕೊಂಡು ಬರಬೇಕು ಅಂತ ಹೇಳಿ ಕಳಿಸಿದೆವು‌. ಲಾವಣ್ಯ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದಳು. ವಿದ್ಯಾರ್ಥಿ ಸಂಘದಲ್ಲಿ ಲಿಂಗತಾರತಮ್ಯ ವಿಭಾಗೀಯ ತಾರತಮ್ಯದಿಂದ ನಮ್ಮ ಕ್ಲಾಸಿಗೆ ಅಂದುಕೊಂಡ ಪ್ರಾತಿನಿಧ್ಯ ಸಿಗದೇ ಇದ್ದುದರಲ್ಲಿ ನಿರಾಶೆ ಇದ್ದರೂ ಸ್ವತಃ ನಾನೇ ತರಗತಿ ಪ್ರತಿನಿಧಿಯಾಗಲು ಸಿದ್ದನಾಗದೆ ಇದ್ದುದರಿಂದ ಪ್ರಶ್ನೆ ಮಾಡುವ ನೈತಿಕತೆ ಇರಲಿಲ್ಲ. ಪ್ರತಿವರ್ಷ ಬಿ‌.ಕಾಂ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘದ ಅಧ್ಯಕ್ಷತೆ ವಹಿಸುತ್ತಿದ್ದರು. ಆದರೆ ಈ ಬಾರಿ ಅಧ್ಯಕ್ಷತೆಯನ್ನು ಉಳಿಸಿಕೊಳ್ಳಲು ಬಿ‌.ಕಾಂನವರಿಗೆ ಆಗಲಿಲ್ಲ. ಆ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಸಂಘದ ಪ್ರಾತಿನಿಧ್ಯ ಇರುವ ಕಡೆ ಬಿ.ಕಾಂನವರು ಸಣ್ಣಮಟ್ಟಿಗೆ ಅಸಹಕಾರ ತೋರಿಸುತ್ತಿದ್ದರು. ವಿದ್ಯಾರ್ಥಿಸಂಘದ ಕಡೆಯಿಂದ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಯಾವುದೇ ಕಾರ್ಯಕ್ರಮ ನಡೆಯಲಿಲ್ಲ. ಔಪಚಾರಿಕ ನೆಲೆಗಟ್ಟಿನಲ್ಲಿ ಮಾತ್ರ ರಚಿತವಾದ ವಿದ್ಯಾರ್ಥಿ ಸಂಘದ ಚಟುವಟಿಕೆಗಳು ಕೇವಲ ಔಪಚಾರಿಕವಾಗಿ ಮಾತ್ರ ಉಳಿಯಿತು. ಕರೋನ ಬಿಕ್ಕಟ್ಟನಿಂದ ಹೊರಬರುತ್ತಿದ್ದ ಆ ದಿನಗಳಲ್ಲಿ ವಿದ್ಯಾರ್ಥಿಗಳು ಹಲವು ವಿಧದಲ್ಲಿ ಶೋಷಣೆಗೆ ಒಳಗಾಗ್ತಾ ಇದ್ದರು. ಹಲವು ಸವಲತ್ತುಗಳು ನಿಷೇಧಿಸಲ್ಪಡುತ್ತಿತ್ತು ಅಥವಾ ತಡವಾಗುತ್ತಿತ್ತು. ಕೆಲವು ಘಟನೆಗಳು ಪರೋಕ್ಷವಾಗಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಹಾಳುಮಾಡುತ್ತಿತ್ತು. ಅದಕ್ಕೆದುರಾಗಿ ಸ್ಪಂದಿಸುವ ಅಥವಾ ಪ್ರತಿಕ್ರಯಿಸಲು ವಿದ್ಯಾರ್ಥಿ ಸಂಘ ಅಥವಾ ಕ್ಯಾಂಪಸ್‌ನಲ್ಲಿ ಬೇರೂರಿದ್ದ ವಿದ್ಯಾರ್ಥಿ ಸಂಘಟನೆಗಳು ಸಂಪೂರ್ಣ ಹಿನ್ನಡೆಯಾಗಿತ್ತು. ಬಹುಶಃ ಸ್ಪರ್ಧಾತ್ಮಕತೆಯ ಅಭಾವ ಅಥವಾ ಏಕಾಧಿಪತ್ಯ ಸಮಾಜದ ಸ್ಥಿತಿ ಹೀಗೆ…! ಈ ಮಾತುಗಳನ್ನು ಬರೆಯಲು ಅರ್ಹತೆಯ ವಿಚಾರವನ್ನು ಜಾಸ್ತಿ ಆಲೋಚನೆ ಮಾಡಿದರೆ ಎಂತದೂ ಮನಬಿಚ್ಚಿ ಬರೆಯಲಾಗದು. ಹಾಗಾಗಿ ಮನಬಿಚ್ಚಿ ವಿಮರ್ಶಿಸಲೇ ಬೇಕು. ವಿಮರ್ಶೆ ಎಂದರೆ ಋಣಾತ್ಮಕ ಮಾತ್ರವಲ್ಲ. ಧನಾತ್ಮಕವೂ ಹೌದು‌. ಆದರೆ ವೈಯಕ್ತಿಕ ವಿಮರ್ಶೆಗಳಿಗೆ ಜಾಸ್ತಿ ಒತ್ತುಕೊಡಲು ಬಯಸದ ಕಾರಣದಿಂದ ಈ ಬರಹ ಅಸ್ಪಷ್ಟವಾಗಬಹುದು…😁


ವಿಭಾಗೀಯ ಕಾರ್ಯಕ್ರಮಗಳು

ಸಯನ್ಸ್ ಅಸೋಸಿಯೇಷನ್ ವತಿಯಿಂದ ಸಯನ್ಸ್ ಮೋಡೆಲ್ ಕಾಂಫಿಟೇಶನ್ ನಡೆಸಲು ತೀರ್ಮಾನಿಸಿದ್ದರು. ನಾನು ಫಸ್ಟ್ ಇಯರ್‌ನಲ್ಲಿದ್ದಾಗ ಚಸ್ವಿತ್, ಜತಿನ್ ಮತ್ತು ನಾನು ಸೇರಿ ಮೋಡೆಲ್ ಮಾಡಿ ತೃತೀಯ ಬಹುಮಾನ ಪಡೆದಿದ್ದೆವು. ಕಳೆದ ಸಲ ಕರೋನದಿಂದ ಇದೇನೂ ಇರಲಿಲ್ಲ. ಈ ಬಾರಿ ಸಯನ್ಸ್ ಮೋಡೆಲ್ ತಯಾರಿಸುವ ಸ್ಪರ್ಧೆಯ ಸುದ್ದಿ ಕೇಳಿದೊಡನೆ ನಾವು ಕ್ಲಾಸಲ್ಲಿ ಎಲ್ಲರೂ ಮಾತನಾಡಿಕೊಂಡೆವು. ಆ ದಿನವೇ ಪುನೀತ, ಅಂಜಲಿ ಮತ್ತು ನಾನು ಮೂವರು ಸೇರಿ ಟೀಂ ಮಾಡಿದೆವು. ನಮ್ಮ ಕ್ಲಾಸಿನಲ್ಲಿ ಕೆಲವರಾದರೂ ಮೇತ್ಸ್ ಮೋಡೆಲ್ ಮಾಡಿ ಅಂತ ಉಷಾ ಮೇಡಂ ಹೇಳಿದರು. ಆದರೆ ಮೇತ್ಸ್ ಮೋಡೆಲ್ ಅಂದರೆ ಅದು ಉಪ್ಪು- ಹುಳಿ - ಕಾರ ಇರುದಿಲ್ಲ ಅಂತ ನಾನು ಹೇಳ್ತಾ ಇದ್ದೆ. ಆದರೆ ಮೇತ್ಸ್ ಮೋಡೆಲ್‌ನ ಸಾಧ್ಯತೆಗಳ ಬಗ್ಗೆ ಮೇಡಂನ ಜೊತೆ ಮಾತನಾಡುತ್ತಾ… ನನ್ನ ಟೀಂನೊಟ್ಟಿಗೆ ಚರ್ಚೆ ಮಾಡುತ್ತಾ ನಾವು ಗ್ರಾಫ್ ಥಿಯರಿಗೆ ಸಂಬಂಧಿಸಿದ ಒಂದು Road Traffic Management System ಮಾದರಿ ತಯಾರಿಸುವುದಾಗಿ ತೀರ್ಮಾಸಿದೆವು. ಆದಷ್ಟು ಬೇಗ ತಯಾರಿ ಮಾಡಿದೆವು. ನಮ್ಮ ಗಣಿತ ವಿಜ್ಞಾನ ಮಾದರಿಗೆ ಅತ್ಯುತ್ತಮ ಅಭಿಪ್ರಾಯಗಳು ಬಂತು. ನಾವು ಮೂವರು ಪ್ರಥಮ ಸ್ಥಾನದ ಆಕಾಂಕ್ಷಿಗಳಾದರೂ ದ್ವಿತೀಯ ಬಹುಮಾನಕ್ಕೆ ಸಂತೃಪ್ತರಾದೆವು.



ಇವಿಷ್ಟು ಎಂಟು ತಿಂಗಳ ಹಿಂದೆ ಬರೆದಿಟ್ಟ ಸಾಲುಗಳು…

ಇದೀಗ ಉಳಿದದನ್ನು ನೆನಪಿಸಿಕೊಳ್ಳುವ ಪ್ರಯತ್ನ…


ಫಿಲೋಮಿನಾ ಕಾಲೇಜು ಪುತ್ತೂರಿನ ಸಯನ್ಸ್ ಫೆಸ್ಟ್
ಫಿಲೋಮಿನಾ ಕಾಲೇಜಿನಲ್ಲಿ ಭಾಗವಹಿಸಿ ನಾನು ಮತ್ತು ಜಗದೀಶ ಕೆಮಿಸ್ಟ್ರಿ ಕ್ವಿಸ್‌ನಲ್ಲಿ ಪ್ರಥಮ ಬಹುಮಾನ ಪಡೆದೆವು. ಇತರೆ ಮೂರು ಬಹುಮಾನ ನಮ್ಮ ತಂಡಕ್ಕೆ ಬಂದ ಖುಷಿ... (ಯಾರಿಗೆ ಯಾವ ಬಹುಮಾನ ಬಂದಿದೆ ಎಂಬ ಅಸ್ಪಷ್ಟ ನೆನಪು ಮಾತ್ರ ಬಾಕಿ. ಹಾಗಾಗಿ ಉಲ್ಲೇಖವಿಲ್ಲ)
ಅಮರ ಸುಳ್ಯ ದಂಗೆಯ ಕೆದೆಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆ ಸುಳ್ಯದ ಮೂಲಕ ಹಾದುಹೋದಾಗ..
ಸುಳ್ಯದಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಕ್ಕೆ 1837 ಕ್ಕೆ ಚಾಲನೆ ನೀಡಿದ ಕೆದೆಂಬಾಡಿಯವರ ಕಂಚಿನ ಪ್ರತಿಮೆ ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಸ್ಥಾಪಿಸುವ ಸಲುವಾಗಿ ಸುಳ್ಯದ ಮೂಲಕ ವಿಜೃಂಭಣೆಯಿಂದ ಕೊಂಡೊಯ್ಯಲಾಯಿತು. ಆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದಾಗ...
ಕುರುಂಜಿ ವೆಂಕಟ್ರಮಣ ಗೌಡ್ರು ಮತ್ತು ಕೆದಂಬಾಡಿ ರಾಮಯ್ಯಗೌಡರ ಐತಿಹಾಸಿಕ ಭೇಟಿ


ವಾರ್ಷಿಕ ಪ್ರವಾಸ...🙆

ಅಂತಿಮ ವರ್ಷ ವಿದ್ಯಾರ್ಥಿಗಳು ಎಂದ ಮೇಲೆ ಕಾಲೇಜಿನಿಂದ ಶೈಕ್ಷಣಿಕ ಪ್ರವಾಸದ ಶೀರ್ಷಿಕೆಯಡಿ ಎಲ್ಲರೂ ಪ್ರವಾಸ ಹೋಗುವುದು ಸಾಮಾನ್ಯ. ನಮ್ಮ ಕ್ಲಾಸಿಗರಲ್ಲೂ ಆ ಬಯಕೆ ಹುಟ್ಟಿತು. ಯೋಚನೆ‌, ಯೋಜನೆಗಳು ಸಕ್ರಿಯವಾಯಿತು. ಕೇರಳ-ಕರ್ನಾಟಕದಾದ್ಯಂತ ಹಲವು ಪ್ರವಾಸ ತಾಣಗಳ ಆಲೋಚನೆ ಆಯ್ತು. ಕೊನೆಯದಾಗಿ ಮೈಸೂರು ಯೋಜನೆ ಕೈಗೆತ್ತಿಕೊಂಡೆವು. ನನ್ನ ಕ್ಲಾಸಿನ ದಿವಿತ್, ಚರೀಷ್ಮ ಮತ್ತು ನಾನು ಮೂವರು ಈ ಪ್ರವಾಸ ಸಂಯೋಜನೆಯಲ್ಲಿ ತಲೆಕೆಡಿಸಿಕೊಂಡವರು. ತರಗತಿಯೊಳಗಿನ ವಿಭಾಗೀಯ ಗುಂಪುಗಾರಿಕೆ, ವಿದ್ಯಾರ್ಥಿಗಳ ಹಣಕಾಸಿನ ಮಿತಿ, ಗ್ರಾಮೀಣ ಪ್ರದೇಶ ಜನರ ಮನೆಯ ಸಮಸ್ಯೆಗಳು, ವಿದ್ಯಾರ್ಥಿಗಳು ಸಂಖ್ಯೆಯ ಕೊರತೆ, ಆರೋಗ್ಯ ಸಮಸ್ಯೆಗಳು, ಆಡಳಿತಾತ್ಮಕ ಸಮಸ್ಯೆಗಳು ಹೀಗೆ ಹತ್ತಾರು ಸಮಸ್ಯೆಗಳು. ಹೀಗೆ ಕೆಲವೊಮ್ಮೆ ಪ್ರವಾಸದ ಆಲೋಚನೆಯೇ ಬೇಡವೆಂದ ಸ್ಥಿತಿ ಎದುರಾಗುತ್ತಿತ್ತು. ಆದರೂ ತರಗತಿಯೊಳಗಿನ ನಮ್ಮ‌ ವಿಭಾಗದ 90% ವಿದ್ಯಾರ್ಥಿಗಳು ಆಸಕ್ತರಾಗಿದ್ದರು ಮತ್ತು ನಮ್ಮ ಉಷಾ ಮೇಡಂನ ಬೆಂಬಲ ಸದಾ ನಮ್ಮಲ್ಲಿನ ಉತ್ಸಾಹ ನಂದಿಹೋಗದಂತೆ ನೋಡಿಕೊಂಡಿತು. ಪುರುಷ ಉಪನ್ಯಾಸಕರ ಕೊರತೆಯಿರುವುದರಿಂದ‌ ದೂರದ ಪ್ರವಾಸಕ್ಕೆ ಅನುಮತಿ ನೀಡಲು ಕಾಲೇಜು ಆಡಳಿತ ಮಂಡಳಿ ಹಿಂದೇಟು ಹಾಕಬಹುದು ಎಂದು ಅವರಿಗೆ ಮೌನಿಯಾಗಿರಬಹುದಿತ್ತು…! ಆದರೆ ಅವರು ಹಾಗೆ ಮಾಡಿಲ್ಲ. ಉಷಾ ಮೇಡಂ ಅವರು ಆರೋಗ್ಯದ ಹಾಗೂ ಇತರೆ ವೈಯಕ್ತಿಕ ಸಮಸ್ಯೆಗಳಿಂದ ನಮ್ಮೊಂದಿಗೆ ಆಗಮಿಸಲು ಸಾಧ್ಯವಿಲ್ಲ ಎಂದು ತಿಳಿಸಿದರೂ, ನಮಗಿಂತಲೂ ಉತ್ಸಾಹದಿಂದ ಪ್ರಾಂಶುಪಾಲರೊಡನೆ ಮಾತನಾಡಿ ನಮ್ಮ ತರಗತಿ ಪ್ರವಾಸಕ್ಕೆ ಅನುಮತಿ ತೆಗೆಸಿಕೊಟ್ಟದಕ್ಕೆ ನಾನೇ ಸಾಕ್ಷಿ..! ನಮ್ಮೊಂದಿಗೆ ಆಗಮಿಸಲು ನಮ್ಮ ಸಯನ್ಸ್ ಡಿಪಾರ್ಟ್ಮೆಂಟ್‌ನ ಮೂವರು ಮೇಡಂಗಳು ಮಾತ್ರ ತಯಾರಿದ್ದರು. ಪುರುಷ ಉಪನ್ಯಾಸಕರು ಓರ್ವರು ಅಗತ್ಯ ಎಂದು ತಿಳಿದು ನಮ್ಮ ಕಾಲೇಜಿನ ಬೇರೆ ಡಿಪಾರ್ಟ್ಮೆಂಟ್‌ನ ಒಬ್ಬರು ಉಪನ್ಯಾಸಕರನ್ನು ವಿನಂತಿಸಿದರು. ಮೇಡಂನ ಪ್ರೀತಿಯ ಒಂದೇ ಮಾತಿಗೆ ಯಾವ ಷರತ್ತೂ ಇಲ್ಲದೆ ಅವರು ಒಪ್ಪಿಕೊಂಡಿದ್ದರು. ಇದಕ್ಕೂ ನಾನೇ ಸಾಕ್ಷಿ..! ಮುಂದುವರಿದು ಆ ಉಪನ್ಯಾಸಕರು ಹೋದ ಬಳಿಕ‌ ಅವರಿಗೆ ತಗಲುವ ಖರ್ಚನ್ನು ತಾನೇ ವಹಿಸುವುದಾಗಿ ತಿಳಿಸಿದರು. ನಮ್ಮೊಂದಿಗೆ ಪ್ರವಾಸದಲ್ಲಿ ಭಾಗವಹಿಸಲು ಅವಕಾಶವಿಲ್ಲದೆ, ನಮ್ಮೊಂದಿಗೆ ಬರುವ ಉಪನ್ಯಾಸಕರೋರ್ವರ ವೆಚ್ಚ ಮೇಡಂ ಬರಿಸುವುದು ನನಗೆ ಸರಿಯೆನಿಸಲಿಲ್ಲ. ಹಾಗಾಗಿ ಅದು ನಾನು ನಿರಾಕರಿಸಿದೆ. ಆದರೆ, ನಮ್ಮ ಸದ್ಯದ ಸ್ಥಿತಿಗತಿಯಲ್ಲಿ ಪ್ರವಾಸಕ್ಕೆ ವ್ಯವಸ್ಥೆ ಮಾಡುವುದೇ ಕಷ್ಟ ಎನ್ನುವ ಸ್ಥಿತಿಯಲ್ಲಿದ್ದಾಗ ಬೇರೆ ಡಿಪಾರ್ಟ್ಮೆಂಟ್‌ನ ಉಪನ್ಯಾಸಕರ ಹೊರೆ ನಾವು ಭರಿಸುವುದು ಕಷ್ಟ ಎಂಬ ಸತ್ಯ ನಮಗಿಂತ ಚೆನ್ನಾಗಿ ಅವರು ಅರ್ಥ ಮಾಡಿದ್ದರು. ಆ ಉಪನ್ಯಾಸಕರ ವೈಯಕ್ತಿಕ ಸ್ಥಿತಿಗತಿಗಳ ಬಗ್ಗೆ ಅರಿವಿದ್ದ ಉಷಾ ಮೇಡಂ ಯಾವುದೇ ಕಾರಣಕ್ಕೂ ಅವರಿಂದ ಹಣ ಸ್ವೀಕರಿಸಬಾರದು ಎಂದೂ ಹೃದಯ ವೈಶಾಲ್ಯತೆ ಮೆರೆದರು. ಇವೆರಡನ್ನು ನನಗೆ ಅವರು ವಿವರಿಸಿದರು. ಎರಡೂ ಸತ್ಯ. ಆದರೆ ಈ ಎರಡು ಕಾರಣಕ್ಕಾಗಿ ನಾನು ಅವರಿಂದ ಹಣ ತಕೊಳುವುದು ಎಲ್ಲಿಯ ನ್ಯಾಯ ಎಂದ ನೈತಿಕ ಪ್ರಶ್ನೆ ನನ್ನಲ್ಲಿ ಮೂಡಿತು. ಅದನ್ನು ಅವರಿಗೆ ಕೇಳಿದೆ.‌ ಮನೆಯಲ್ಲಿ ಮಕ್ಕಳಿಗೆ ಕಷ್ಟಗಳು ಬಂದಾಗ ಅಪ್ಪ ಅಥವಾ ಅಮ್ಮ ದುಡ್ಡು ಕೊಡುವುದರಲ್ಲಿ ನೈತಿಕತೆಯ ಪ್ರಶ್ನೆ ಇದೆಯಾ ಎಂಬ ಅವರ ಖಡಕ್ ಪ್ರಶ್ನೆಮುಂದೆ ನಾನು ಮೌನಿಯಾದೆ. ಮೇಡಂನ ಸೂಚನೆಯಂತೆ ಈ ವಿಷಯ ಗೌಪ್ಯವಾಗಿಟ್ಟು ಪ್ರವಾಸದ ಸಿದ್ಧತೆಗೆ ಗೆಳೆಯರೊಂದಿಗೆ ಮಗ್ನನಾದೆ. ಹಾಗೂ ಹೀಗೂ ಒಂದು ದಿನ ಪ್ರವಾಸಕ್ಕೆ ದಿನ ನಿಗದಿ ಮಾಡಿದೆವು. ಆದರೆ ದುರದೃಷ್ಟವೋ ಅದೃಷ್ಟವೋ ಅನಿರೀಕ್ಷಿತವಾಗಿ ಆ ದಿನ ಮೈಸೂರಿಗೆ ಮೋದಿಯವರ ಭೇಟಿ ನಿಗದಿಯಾಗಿತ್ತು. ಪೋಲೀಸ್ ಮೈಸೂರು ನಗರದಾದ್ಯಂತ ಭದ್ರೆತೆ ಬಿಗಿಗೊಳಿಸುವ ಅಥವಾ ಟ್ರಾಫಿಕ್ ಜನ ಸಂದಣಿ ಹೆಚ್ಚಾಗುವ ಸಾಧ್ಯತೆ ಮನಗಂಡೆವು. ಇದು ನಮ್ಮ ಪ್ರವಾಸದ‌‌ ಸಮಯ ನಿರ್ವಹಣೆಗೆ ಸಮಸ್ಯೆಯಾಗಬಹುದು‌ ಎಂಬುದು ಖಚಿತವಾಯ್ತು. ಏನಾದರೂ ಸರಿ, ಪ್ರವಾಸ ಮುಂದೂಡುವುದು ಬೇಡ; ಮುಂದೂಡಿದರೆ ಇನ್ನೊಮ್ಮೆ ಪ್ರವಾಸ ಮಾಡುವುದೇ ಅಸಾಧ್ಯ ಆದೀತು ಎಂಬುದು ಹೆಚ್ಚಿನವರ ಅನಿಸಿಕೆ. ನಮ್ಮ‌ ಅಂದಿನ ವರ್ಣನಾತೀತ ಸನ್ನಿವೇಷಕ್ಕೆ ಅದು ಸತ್ಯದ ಮಾತು. ತಂದೆ-ತಾಯಿ, ಗುರು ಮತ್ತು ದೇವರ ಆಶಿರ್ವಾದ ಇದ್ದರೆ ಅಸಾಧ್ಯವಾದುದು ಏನಿದೆ…! ಇವೆಲ್ಲವೂ ಅಂದು ಬೇಕಾದಷ್ಟು ಇತ್ತು. ನಮ್ಮ ಇಚ್ಛಾಶಕ್ತಿಗಿಂತಲೂ ಇವೇ ಮೂಲಾಧಾರವಾಗಿತ್ತು. ಪ್ರವಾಸದ ಹಿಂದಿನ ಎರಡು ದಿನ ನಾವು ಮೂವರು ವಿದ್ಯಾರ್ಥಿಗಳಿಗೆ ಒತ್ತಡದ ಸುರಿಮಳೆಯೇ ಆಗಿತ್ತು. ಬಸ್‌ನ ವ್ಯವಸ್ಥೆಗೆ ಕೈ ಹಾಕಿದ್ದ ವಿದ್ಯಾರ್ಥಿಯ ಸಂವಹನ ಸಮಸ್ಯೆ - ಅಚಾತುರ್ಯ, ನಮ್ಮ ಸಮತೋಲಿತ ಆಯ-ವ್ಯಯದಲ್ಲಿದ್ದ ಒಂದಿಬ್ಬರು ವಿದ್ಯಾರ್ಥಿಗಳು ಅನಿರೀಕ್ಷಿತ ಕಾರಣಗಳ ಹೆಸರಲ್ಲಿ ಪ್ರವಾಸ ಬರಲು ಹಿಂದೇಟು ಹಾಕಿದ್ದರು. ಹಾಗಾಗಿ ನಮ್ಮ ಆಯ-ವ್ಯಯ ಲೆಕ್ಕಾಚಾರ ಕೈತಪ್ಪುವುದು ಖಚಿತವೆನಿಸಿತು. ಹಾಗಾಗಿ ಹೆಸರು ನೊಂದಾಯಿಸಿ ಪ್ರವಾಸಕ್ಕೆ ಬಾರದವರು ಬಸ್ಸಿನ ಬಾಡಿಗೆ ಹಾಗೂ ಮುಂಗಡ ಪಾವತಿಸಿದ ಕೆಲವು ಟಿಕೇಟ್‌ಗಳ ಹಣದ ಪಾಲು ಕೊಡಲೇ ಬೇಕು ಎಂದು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಯಿತು.‌ ಆ ನಿರ್ಧಾರ ಅಮಾನವೀಯ ಎಂಬುದು ಪ್ರತಿ ಕ್ಷಣ ಮನಸ್ಸು ಹೇಳತೊಡಗಿತು. ಆದರೆ ಆ ಸಂದರ್ಭದಲ್ಲಿ ಅಂತಹದೊಂದು ಕಟು ತೀರ್ಮಾನ ಕೈಗೊಳ್ಖದಿದ್ದರೆ ಇನ್ನೂ ಕೆಲವು ಮಂದಿ ಪ್ರವಾಸದಿಂದ ಹಿಂದೆ ಸರಿಯುತಿದ್ದರು ಎಂಬುದರಲ್ಲಿ ಅನುಮಾನವಿರಲಿಲ್ಲ. ಹಾಗೆ ಆಗುತ್ತಿದ್ದರೆ ಪ್ರವಾಸದ ಆಸೆ, ಆಸೆ ಮಾತ್ರವಾಗಿ ಉಳಿಯುತ್ತಿತ್ತು.  ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ಸಂಘಟಕರು ಅನುಭವಿಸುವ ಸಂಕೀರ್ಣತೆಗಳ ಸ್ಪಷ್ಟ ಪ್ರಾತ್ಯಕ್ಷಿಕೆಯನ್ನು ಅನುಭವಿಸುತ್ತಿದ್ದೆ. ಬಸ್ಸಿನವರಿಗೂ ಮುಂಗಡ ಹಣ ನೀಡಿ ಆಗಿತ್ತು. ದೇವರನ್ನು ನಂಬಿ ಮುಂದೆ ಹೋದೆವು. ಪ್ರವಾಸದ ಹಿಂದಿನ ದಿನ ಉಷಾ ಮೇಡಂ‌ ನನ್ನನ್ನು ವೈಯಕ್ತಿಕವಾಗಿ ಕರೆದ ₹2000 ನನಗೆ ನೀಡಿದರು. ಆ ಹೊತ್ತಿನ ಸನ್ನಿವೇಶ ವರ್ಣಿಸಿದಷ್ಟೂ ಪೂರ್ಣವಾಗದು. ಪ್ರವಾಸದ ಹಿಂದಿನ ಕಾಲೇಜು ದಿನದಂದು ಹೆಸರು ನೋಂದಾಯಿಸಿ ಬರಲಾಗದು ಎಂದು ಹೇಳಿದ ಒಬ್ಬಾಕೆ ಸ್ನೇಹಿತೆ ಆಕೆ ನೀಡಬೇಕೆಂದು ಹೇಳಿದ ಹಣದೊಂದಿಗೆ ಬಂದಿದ್ದಳು. ನಾನೇ ನೇರವಾಗಿ ಹಣ ಕೇಳಿದೆ. ಒತ್ತಡದ ಮನಸ್ಸಿಂದ ಬೇರೆ ನಿರ್ವಾಹವಿಲ್ಲದೆ ಹಣವನ್ನು ನೀಡಿದಳು. ಬಹುಶಃ ಆಕೆಗೆ ಹಣ ಕೊಡಲಾಗದು ಎಂಬ ನಿಲುವು ತಳೆಯಬಹುದಾಗಿತ್ತು. ಆದರೂ ಆಕೆ ಹಣ ನೀಡಲು ಆಕೆಯ ನೈತಿಕ ಜವಾಬ್ದಾರಿ, ನಮ್ಮ ಸ್ಥಿತಿಯ ಮೇಲಿನ ಅನುಕಂಪ, ಆತ್ಮೀಯತೆಗಳು ಕಾರಣವಾಗಿರಬಹುದು. ಆಕೆಗೆ ಸಂಬಂಧಿಸಿದಂತೆ ಆ ಹಣ ತೀರ ಕ್ಷುಲ್ಲಕವೇನೂ ಆಗಿರದು (ಆಕೆಗಷ್ಟೇ ಅಲ್ಲ, ನನ್ನ ತರಗತಿಯಲ್ಲಿದ್ದ ನಾನೂ ಸೇರಿದಂತೆ ಬಹುತೇಕರಿಗೂ ಅಷ್ಟೇ). ಅವಳು ನೀಡುವ ಹಣ ನಾನು ಸ್ವೀಕರಿಸಲಾರೆ ಎಂದೂ ಆಕೆ ಭಾವಿಸಿರಲೂಬಹದು. ನನ್ನ ಮನಸ್ಸಿಲ್ಲದ ಮನಸ್ಸಿಂದ ಆಕೆ ನೀಡಿದ ಹಣದ ನೋಟನ್ನು ತೆಗೆದು ಅದನ್ನು ಪ್ರತ್ಯೇಕವಾಗಿ ನನ್ನ ಫೈಲಲ್ಲಿ ತೆಗೆದಿಟ್ಟೆ. ಪ್ರವಾಸ ಕಳೆದು ಬಂದ ಮೇಲೆ ಅದೇ ನೋಟನ್ನು ಆಕೆಗೆ ಮರಳಿ‌ ನೀಡಲು ದೇವರು ಅನುಗ್ರಹಿಸಲಿ ಎಂಬ ಪ್ರಾರ್ಥನೆ ಮಾತ್ರ ಜೊತೆಯಾಗಿತ್ತು…

ಪ್ರವಾಸದ ಹಿಂದಿನ ದಿನ ಸಂಜೆ ನಾನು ನನ್ನ ಇತರೆ ಕೆಲವು ಮಂದಿ ಗೆಳೆಯರೊಂದಿಗೆ ಕಾಲೇಜು ಸಮೀಪದಲ್ಲಿದ್ದ ಇನ್ನೋರ್ವ ಗೆಳೆಯನ ನಿವಾಸದಲ್ಲಿ ರಾತ್ರಿ ಕಳೆದೆವು. ಮರುದಿನ ಬೆಳಿಗ್ಗೆ 4.30 ಕ್ಕೆ ಕಾಲೇಜು ಆವರಣದಿಂದ ಪ್ರಯಾಣ ಹೊರಟೆವು‌. ಆದರೆ ಇನ್ನೊಬಾಕೆ ಅನಿವಾರ್ಯ ಕಾರಣದಿಂದ ಪ್ರವಾಸಕ್ಕೆ ಬರಲಾಗಲಿಲ್ಲ. ಅದೂ ಒಂದು ದುರ್ವಿಧಿ..! ಆಕೆಗೂ ನಮಗೂ..! ಆಕೆ ವಿದ್ಯಾರ್ಥಿನಿ ಆದರೂ ಉದ್ಯೋಗಸ್ಥೆ ಕೂಡ ಆಗಿರುವುದರಿಂದ ಆಕೆಗೆ ಹಣ ಹಿಂತಿರುಗಿಸುವಲ್ಲಿ ಸಮಸ್ಯೆ ಆದರೂ ಚಿಂತೆಯಿಲ್ಲ ಎಂಬಂತೆ ಪ್ರಯಾಣಿಸಿದೆವು. ಸುಳ್ಯದಲ್ಲಿ ಚೆನ್ನಕೇಶವ ದೇವರಿಗೆ ಕೈಮುಗಿದು, ಕೊಯನಾಡು ಗಣಪತಿ ದೇವರಿಗೆ ಪ್ರಾರ್ಥಿಸಿ ಮೈಸೂರಿಗೆ ಹೋದೆವು. ಮೈಸೂರಿನ ಜೆ.ಕೆ ಟಯರ್ ಫಾಕ್ಟರಿ ಆವರಣ, ಸಂತ ಫೀಲೋಮಿನಾ‌ ಚರ್ಚ್, ಜಿ.ಆರ್.ಎಸ್ ವಾಟರ್ ಥೀಂ ಪಾರ್ಕ್, ಕೆ.ಆರ್.ಎಸ್ ಡ್ಯಾಂ ಹಾಗೂ ಉದ್ಯಾನವನ ಮೊದಲಾದ ಸ್ಥಳಗಳಿಗೆ ಭೇಟಿ ನೀಡಿದೆವು. ಪ್ರವಾಸದ ನೆನಪಿಗಿಂತ ಪ್ರವಾಸ ಸಿದ್ದತೆಯ ನೆನಪೇ ಅಮರ…!!!







ಪ್ರವಾಸ ಅಚ್ಚುಕಟ್ಟಾಗಿ ಮುಗಿಸಿ ಮರುದಿನ ಸೂರ್ಯೋದಕ್ಕೂ ಮೊದಲೇ ಕ್ಷೇಮವಾಗಿ ಸುಳ್ಯಕ್ಕೆ ವಾಪಾಸು ಬಂದೆವು. ಎಲ್ಲರೂ ಕ್ಷೇಮವಾಗಿ ಮನೆಗೆ ತಲುಪಿರುವುದಾಗಿ ಖಚಿತಗೊಳಿಸಿಕೊಂಡೆವು. ಮುಂದಿ‌ನ ಕಾಲೇಜು ದಿನದಲ್ಲೇ ಪ್ರವಾಸ ಲೆಕ್ಕಾಚಾರ ಮಂಡಿಸಿ ಮೇಡಂ ನೀಡಿದ ಆರ್ಥಿಕ ಸಹಕಾರದ‌‌ ಲೆಕ್ಕವನ್ನೂ ಅವರಿಗೆ ತಿಳಿಸಿದೆವು‌‌‌. ಪ್ರವಾಸಕ್ಕೆ ಬರಲಾಗದು ಎಂದು ಹಿಂದಿನ ದಿನವೇ ತಿಳಿಸಿ, ಅನಿವಾರ್ಯವಾಗಿ ಹಣ ನೀಡಿದವರಿಗೆ ಅವರು ನೀಡಿದ ಅದೇ ಹಣದ ನೋಟನ್ನು ಸಂಪೂರ್ಣ ವಾಪಾಸು ಕೊಡಿಸುವಲ್ಲಿ ದೇವರು ಆಶಿರ್ವದಿಸಿದನು. ಅದಕ್ಕಿಂದ ಆತ್ಮತೃಪ್ತಿ ಬೇರೆಯಿಲ್ಲ… ಪ್ರವಾಸದ ದಿನ ಅನಿರೀಕ್ಷಿತ ಬರಲಾಗದಾಕೆಗೆ ಮಾನವೀಯತೆಯ ಮೇರೆ ಸ್ವಯಂಪ್ರೇರಿತವಾಗಿ ನಮ್ಮ ತರಗತಿಯವರು ಸ್ವಲ್ಪ ಹಣ ಕಲೆಕ್ಟ್ ಮಾಡಿ ಮರಳಿ ನೀಡುದರು. ಬಹುಶಃ ಪ್ರವಾಸಕ್ಕೆ ಬಂದವರೂ, ಬಾರದವರೂ ಎಲ್ಲರೂ ತಕ್ಕಮಟ್ಟಿಗೆ ತೃಪ್ತರಾಗಿರಬಹುದು. ಉಷಾ ಮೇಡಂಗೂ ಹಲವರು ಕೈಲಾದ ಮಟ್ಟಿಗೆ ತಿಂಡಿ, ಉಡುಗೊರೆಗಳನ್ನು ತಂದಿದ್ದರು. 


ಪ್ರಥಮ‌ ವರ್ಷದಿಂದ ದ್ವಿತೀಯ ವರ್ಷಾಂತ್ಯದವರೆಗೆ ನಮ್ಮ ಜೊತೆಯಲ್ಲಿ ಅಕ್ಕನಂತೆ ಇದ್ದ ಗಣಿತ ಉಪನ್ಯಾಸಕಿ ದಿವ್ಯ ಮೇಡಂ ಇವರ ಮದುವೆ ಸಮಾರಂಭದಲ್ಲಿ ನಾವು ಸಹಪಾಠಿಗಳು ಭಾಗಿಯಾದಾಗ...
ಬೀಳ್ಕೊಡುಗೆ ಸಮಾರಂಭದಲ್ಲಿ...

ಮುಂದಿನ ದಿನಗಳಲ್ಲಿ ಅಂತಿಮ ವರ್ಷದವರಾದ ನಮಗೆ ನಮ್ಮ ಜೂನಿಯರ್‌ಗಳು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು.



ಅದರ ವಿಶೇಷ ಏನೆಂದರೆ, ಕರೋನ ಬಿಕ್ಕಟ್ಟಿನಿಂದ ಹಿಂದುಳಿದ ಶೈಕ್ಷಣಿಕ ವೇಳಾಪಟ್ಟಿ ಸರಿಪಡಿಸಲು ನಮ್ಮ‌ ವಿಶ್ವವಿದ್ಯಾಲಯ ಮೂರನೇ ವರ್ಷದವರ ಪರೀಕ್ಷೆ ಆರಂಭವಾಗುವ ಮೊದಲೇ ಹೊಸ ಬ್ಯಾಚನ್ನು ಪ್ರಥಮ‌ ವರ್ಷಕ್ಕೆ ದಾಖಲು‌ ಮಾಡಿ ತರಗತಿ ಪ್ರಾರಂಭ ಮಾಡಿದ್ದು. ಅಂದರೆ ನಮ್ಮ‌ ಬ್ಯಾಚಿನವರಿಗೆ‌ ಮೂರು ಬ್ಯಾಚಿನ ಜೂನಿಯರ್‌ಗಳು ಸಿಕ್ಕಿದರು. ನಾವು ಸೇರಿ‌ದಂತೆ ನಾಲ್ಕು ಬ್ಯಾಚಿನವರ ಸಮಾಗಮಕ್ಕೆ ಆ ಬೀಳ್ಕೊಡುಗೆ ಸಮಾರಂಭಕ್ಕೆ ಸಾಕ್ಷಿಯಾಯಿತು.‌‌


ಅನಿವಾರ್ಯವಾಗಿ ಉಷಾ ಮೇಡಂನ ಅಸಾನಿಧ್ಯ ದೊಡ್ಡ ಕೊರತೆಯೆನಿಸಿತು. ಬೀಳ್ಕೊಡುಗೆ ಸಮಾರಂಭವೆಂದರೆ ಅಲ್ಲಿ ಸವಿ ನೆನಪುಗಳು ಮೆಲುಕು ಹಾಕುವಿಕೆ, ವಿರಹದ ದುಃಖ ಪ್ರಕಟನೆ, ಇತ್ಯಾದಿ ಸಾಮಾನ್ಯ. ನಮ್ಮಲ್ಲೂ ಹಾಗೆಲ್ಲಾ ಇತ್ತು.




ಆ ಸಮಾರಂಭದಲ್ಲಿ ನಾನು ಅನುಭವ ಹೇಳುವ ಅವಕಾಶ ಸಿಕ್ಕಿದಾಗ ನಾನು ಅಲ್ಲಿ ಇದ್ದ ನನ್ನ ಬ್ಯಾಚಿಗರ ಹೆಸರನ್ನೆಲ್ಲಾ ಹೇಳುವ ಪ್ರಯತ್ನ ಮಾಡಿದೆ.


ಆದರೆ ಒಬ್ಬನ ಹೆಸರು ಬಿಟ್ಟು ಉಳಿದ ಎಲ್ಲರೂ ಹೇಳಿದ್ದೆ ಎಂಬುದು ಮತ್ತೆ ಗೊತ್ತಾಯ್ತು. ಆತನ ಹೆಸರು ಬಿಟ್ಟುಹೋಗಿರುವುದು ಆತನಿಗೂ ಬೇಸರ ಆಗಿರಬಹುದು… ಆದರೆ ಆತ ಈಗ ಸ್ನಾತಕೋತ್ತರ ಪದವಿಯಲ್ಲಿ ನನ್ನ ಹಾಸ್ಟೆಲ್ ರೂಂಮೇಟ್ ಆಗಿರುವುದು ವಿಶೇಷ…!



ಪದವಿ ಪರೀಕ್ಷೆಯ ಕೊನೆಯ ದಿನ ಎಲ್ಲರೂ ಒಟ್ಟಾಗಿ ಸಂಭ್ರಮದಲ್ಲಿ ಚಹಾ-ತಿಂಡಿ ಸೇವಿಸಿ ಬೇರೆ ಬೇರೆಸಯಾದೆವು. ವಿದ್ಯಾರ್ಥಿನಿ ಹಾಗೂ ಉದ್ಯೋಗಿ ಸುಷ್ಮ ಆ ಸಂಜೆಯ ಖರ್ಚು ಭರಿಸಿದಳು…!

ಇಲ್ಲಿಗೆ ಈ ಬರಹ ಸಮಾಪ್ತಯಾಮಿ..!!

(ಏನಾದರೂ ಮರೆತು ಹೋಗಿರಬಹುದಾ… ಖಂಡಿತವಾಗಿ..!!)

ಮಂಗಳೂರು ವಿಶ್ವವಿದ್ಯಾನಿಲಯದ 41 ನೇ ಘಟಿಕೋತ್ಸವದ ಸಂದರ್ಭದಲ್ಲಿ ಪದವೀಧರನಾದಾಗ...




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ