ಎಂ.ಎಸ್ಸಿ ಎಂಬ ಕುತೂಹಲಕಾರಿ ಪಯಣ ಬಹುತೇಕ ಕೊನೆಗೊಂಡಿದೆ. ಇನ್ನು ನಾಲ್ಕನೇ ಸೆಮೆಸ್ಟರ್‌ನ ಪೂರ್ಣಕಾಲಿಕ ಡಸರ್ಟೇಷನ್ (ಪ್ರಾಜೆಕ್ಟ್) ಕೆಲಸ ಮಾತ್ರ ಬಾಕಿ...! (2024 ಮಾರ್ಚ್‌ನಲ್ಲಿ ಬರಹ ಶುರು ಮಾಡಿದಾಗ)
ಕಳೆದ ಮೂರು ಸೆಮೆಸ್ಟರ್‌ನ ಅನುಭವಗಳನ್ನು ಮತ್ತೆ ನೆನಪಿಸಿ ಬ್ಲಾಗಲ್ಲಿ ದಾಖಲಿಸಲು ಈ ಬರಹ...
![]() |
ನಮ್ಮ ತಂಡ @ ಸೈಂಟ್ ಮೇರೀಸ್ ದ್ವೀಪ |
ಬಿ.ಎಸ್ಸಿ ಮುಗಿಸುವಾಗ ಎಂ.ಎಸ್ಸಿ ಮಾಡಬೇಕೋ ಬೇಡವೋ ಎಂಬ ತೀರ್ಮಾನ ಇರಲಿಲ್ಲ. ಆದರೂ ಬಿ.ಎಸ್ಸಿ ಅಂತಿಮ ಸೆಮ್‌ನ ಫಲಿತಾಂಶ ಬರುವ ಮೊದಲು ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಪದವಿ ತರಗತಿಗಳಿಗೆ ಅರ್ಜಿ ಆಹ್ವಾನಿಸಿತು. ವಿಶ್ವವಿದ್ಯಾನಿಲಯ ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿತ್ತು. ಹಾಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವ ಕೂತೂಹಲದಿಂದ ತಡಮಾಡದೆ ಮೊಬೈಲ್ ಮೂಲಕ ಪದವಿಯಲ್ಲಿ ಕಲಿತ ಫಿಸಿಕ್ಸ್, ಕೆಮಿಸ್ಟ್ರಿಗೆ ಅರ್ಜಿ ಹಾಕಿದೆ. ಡಿಗ್ರಿಯಲ್ಲಿ ಈ ವಿಷಯಗಳು ಅಧ್ಯಯನ ಮಾಡಿ ಸುಸ್ತಾಗಿದ್ದರೂ ಇದೇ ಏಕೈಕ ದಾರಿ ಅಂತ ಮನಸ್ಸಲ್ಲಿ ಯೋಚನೆ ಇತ್ತು. ಡಿಗ್ರಿಯಲ್ಲಿ ಗಣಿತವೂ ಒಂದು ಮುಖ್ಯ ವಿಷಯ ಆಗಿತ್ತಾದರೂ ಅದರೊಂದಿಗಿನ ಉತ್ಸುಕತೆಯ ಕೊರತೆ ಹಾಗೂ ಪ್ರವೇಶ ಪರೀಕ್ಷೆ ಎದುರಿಸುವ ಅನಿವಾರ್ಯತೆಯನ್ನು ಮನಗಂಡು ಅರ್ಜಿ ಸಲ್ಲಿಸಲಿಲ್ಲ. ವಿಶ್ವವಿದ್ಯಾನಿಲಯದ ಪ್ರವೇಶಾತಿ ಕೈಪಿಡಿ ನೋಡಿದಾಗ, ನಾನು ಅರ್ಜಿಸಲ್ಲಿಸಲು ಅರ್ಹತೆ ಇರುವ ಇತರೆ ಕೆಲವು ಕೋರ್ಸ್ ಇದೆ ಎಂಬುದು ಗೊತ್ತಾಯಿತು. ಆದರೆ ವಿಷಯವಾರು ಅರ್ಜಿ ಶುಲ್ಕದ ಸ್ಪಷ್ಟತೆ ಇಲ್ಲದ ಕಾರಣದಿಂದ ಬೇರೆ ಹೆಚ್ಚಿನ ಕೋರ್ಸ್‌ಗೆ ಅರ್ಜಿ ಸಲ್ಲಿಸುವ ಪ್ರಯತ್ನ ಮಾಡಲಿಲ್ಲ. ಆದರೆ ಈ ಬಾರಿ ಅರ್ಜಿಶುಲ್ಕ ಇಲ್ಲ ಎಂಬ ವಿಷಯ ಕೆಲವು ದಿನದೊಳಗೆ ತಿಳಿಯಿತು. ತಡಮಾಡದೆ ಮತ್ತೆ ಅರ್ಜಿ ಎಡಿಟ್ ಮಾಡಲು ಪೋರ್ಟಲ್‌ಗೆ ಲಾಗಿನ್ ಆದೆ. ಮತ್ತಷ್ಟೂ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಿದೆ. ಅವು ಸೈಬರ್ ಸೆಕ್ಯೂರಿಟಿ, ಎಲೆಕ್ಟ್ರಾನಿಕ್ಸ್, ಫುಡ್ ಸಯನ್ಸ್ ಏಂಡ್ ನ್ಯೂಟ್ರಿಶನ್, ಜಿಯೋಗ್ರಫಿ, ಲೈಬ್ರರಿ ಏಂಡ್ ಇನ್‌ಫೋರ್‌ಮೇಶನ್ ಸಯನ್ಸ್, ಮರೈನ್ ಜಿಯೋಲಜಿ, ಮೆಡಿಕಲ್ ಫಿಸಿಕ್ಸ್, ಸ್ಟಾಟಿಸ್ಟಿಕ್ಸ್ ಮತ್ತು ಜಿಯೋಇನ್‌ಫಾರ್‌ಮೇಟಿಕ್ಸ್. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಇವುಗಳ ವಿಷಯವಾರು ಸಿಲಬಸ್ ಗಮನಿಸಿದ್ದೆ. ಫಿಸಿಕ್ಸ್ ಮತ್ತು ಕೆಮಿಸ್ಟ್ರಿಗೆ ಅರ್ಜಿ ಸಲ್ಲಿಸಿದ್ದೆಯಾದರೂ ಅಡ್ಮಿಶನ್ ಸಿಗದಿರಲಿ ಅಂತ ಒಳ ಮನಸ್ಸಿನಿಂದ ಪ್ರಾರ್ಥಿಸಿದ್ದೆ. ಹಾಗೆಯೇ ಆಯಿತು. ಉಳಿದಂತೆ ಅರ್ಜಿ ಸಲ್ಲಿಸದ ಕೋರ್ಸ್‌ಗಳಲ್ಲಿ ಫುಡ್ ಸಯನ್ಸ್ ಏಂಡ್ ನ್ಯೂಟ್ರಿಶನ್ ಮತ್ತು ಮೆಡಿಕಲ್ ಫಿಸಿಕ್ಸ್ ಬಿಟ್ಟು ಉಳಿದ ಐದು ಕೋರ್ಸ್‌ಗೆ ಮೆರಿಟ್ ಲಿಸ್ಟ್‌ನಲ್ಲಿ ಸೀಟ್ ಸಿಕ್ಕಿತು. ಅದೇ ವೇಳೆ ಮರೈನ್ ಜಿಯೋಲಜಿಯಜಿ ಮತ್ತು ಜಿಯೋಇನ್‌ಫಾರ್‌ಮೇಟಿಕ್ಸ್ ಸೆಲೆಕ್ಷನ್ ಲಿಸ್ಟ್ ಬಂದಿರಲಿಲ್ಲ. ಉಳಿದ ಕೋರ್ಸ್‌ಗಳ ಕಡೆಯಿಂದ ನಾಳೆ ಬಂದು ಅಡ್ಮಿಶನ್ ಮಾಡಿಸಿ. ಇಲ್ಲದಿದ್ದರೆ ಮತ್ತೆ ಮೆರಿಟ್ ಸೀಟ್ ಸಿಗುವುದಿಲ್ಲ ಅಂತೆ ಕರೆ ಮಾಡ್ತಾ ಇದ್ದರು. ಈ ಎಲ್ಲಾ ಗೊಂದಲದ ಮಧ್ಯೆ ಎಲ್ಲಾ ಕೋರ್ಸ್‌ಗಳ ಸಿಲಬಸ್ ಮತ್ತೆ ಮತ್ತೆ ಓದಿ ನೋಡಿದಾಗ ಬೇರೆ ಯಾವುದೇ ಕೋರ್ಸ್ ಬೇಡ... ಮರೈನ್ ಜಿಲೋಲಜಿಯೇ ಸಾಕು ಅಂತ ತೀರ್ಮಾನಿಸಿದೆ. ಆದರೆ ಅದರ ಸೆಲೆಕ್ಷನ್ ಲಿಸ್ಟ್ ಬಂದಿಲ್ಲ. ಆದರೂ ಧೈರ್ಯ ಮಾಡಿಕೊಂಡು ಕಾದು ನೋಡೋಣ ಅಂತ ಅಡ್ಮಿಶನ್ ಮಾಡಿಸದೆ ಸುಮ್ಮನಾದೆ. ಎರಡನೇ ದಿನ ಸೆಲೆಕ್ಷನ್ ಲಿಸ್ಟ್ ಪ್ರಕಟ ಆಯ್ತು. ವಿಧಿಯೇ..!!! ಜಿಯೋಇನ್‌ಫಾರ್‌ಮೇಟಿಕ್ಸ್‌ಗೆ ಮೆರಿಟ್ ಸೀಟ್ ಸಿಕ್ಕಿತು. ಮರೈನ್ ಜಿಯೋಲಜಿಯಜಿಯ ಮೆರಿಟ್ ಲಿಸ್ಟ್‌ನಲ್ಲಿ ಹೆಸರಿಲ್ಲ. ಒಂದು ಕ್ಷಣ ಸ್ತಬ್ದನಾದೆ. ಕೂಡಲೇ ತೀರ್ಮಾನಿಸಿದೆ. ಏನೇ ಆಗಲಿ ನಾಳೆ ನೇರ ಹೋಗಿ ಸೀಟ್ ಉಳಿದಿದ್ದರೆ ಅಡ್ಮಿಶನ್ ಮಾಡಿ ಬರುವುದು ಅಂತ. ಮರುದಿನ ಆರಾಮದಲ್ಲಿ ಇದ್ದ ಎಲ್ಲಾ ಒರಿಜಿನಲ್ ಅಂಕಪಟ್ಟಿ, ಇತರೆ ದಾಖಲೆಗಳು, ಒಂದು ಕಂತಿನ ಫೀಸ್ ಹಣ ಇವಿಷ್ಟು ತಕೊಂಡು ಮಂಗಳೂರು ವಿಶ್ವವಿದ್ಯಾನಿಲಯದ ಮರೈನ್ ಜಿಲೋಲಜಿ ಡಿಪಾರ್ಟ್‌ಮೆಂಟ್ ಕಡೆಗೆ ಪಯಣಿಸಿದೆ. ಅಲ್ಲಿ ಹೋಗಿ ವಿಚಾರಿಸಿದಾಗ ಲಭಿಸಿದ ಉತ್ತರ... "ಸೀಟ್ ಇಲ್ಲ..!" ಜಿಯೋಇನ್‌ಫಾರ್‌ಮೇಟಿಕ್ಸ್‌ಗೆ ಸೀಟ್ ಇದೆ. ಸೇರಿಕೊಳ್ಳಿ ಅಂದ್ರು..! ಬೇಡ ಅಂತ ವಾಪಾಸು ಹೊರಟಾಗ ಸ್ಕೌಟ್ ಕ್ವಾಟಾದಲ್ಲಿ ಸೀಟ್ ಉಳಿದಿದೆ ಅಂದ್ರು. ನಾನು ಸ್ಕೌಟಿಂಗ್‌ನಲ್ಲಿ ರಾಜ್ಯಪುರಸ್ಕಾರ ಪರೀಕ್ಷೆ ಉತ್ತಿರ್ಣನಾಗಿದ್ದೆ. ಅದರ ಪ್ರಮಾಣ ಪತ್ರ ಕೈಯಲ್ಲಿತ್ತು. ಸ್ಕೌಟಿಂಗ್ ಕೈಹಿಡಿಯಿತು. ನಾನು ಬಯಸಿದ ಕೋರ್ಸ್‌ಗೆ ಅಡ್ಮಿಶನ್ ಮಾಡಿಸಿ ಮನೆಗೆ ಫೋನ್ ಮಾಡಿ ನಿಟ್ಟುಸಿರೆಳೆದೆ. ಸಂಜೆ ಘಂಟೆ ಐದಾಗಿತ್ತು. ಮತ್ತೆ ಮನೆಯತ್ತ ೪-೫ ಗಂಟೆಯ ಅವಸರದ ಮರುಪಯಣ.
ಹಾಗೆ ಮತ್ತೆ ಒಂದು ವಾರದಲ್ಲಿ ಕ್ಲಾಸ್ ಶುರುವಾಯಿತು. ಹಾಸ್ಟೆಲ್ ಜೀವನದೊಂದಿಗೆ ಸ್ನಾತಕೋತ್ತರದ ಆರಂಭವಾಯಿತು...
ಅಪರಿಚಿತರ ನಡುವೆ ನಾನೂ ಒಬ್ಬ ಅಪರಿಚಿತನಾದೆ. ಮತ್ತೆ ದಿನ ಕಳೆದೆಂತ ಎಲ್ಲರೊಡನೆ ಪರಿಚಿತನಾದೆ. ನನ್ನ ಕೋರ್ಸ್‌ನಲ್ಲಿದ್ದ ಬಹುತೇಕರೂ ನನ್ನಂತೆ ಪದವಿಯಲ್ಲಿ ಜಿಯೋಲಜಿ ಆಯ್ಕೆ ಮಾಡಿಕೊಳ್ಳದೆ ಇತರೆ ವಿಜ್ಞಾನ ವಿಷಯಗಳ ಪದವೀಧರರು. ಹಾಗಾಗಿ ನಮಗೆ ಜಿಯೋಲಜಿಯ ಎ, ಬಿ, ಸಿ, ಡಿ ತಲೆಗೆ ಹತ್ತಲು ಕೆಲವು ವಾರಗಳೇ ಬೇಕಾಯ್ತು. ಬಹುಃಶ ಅದು ವೇಗದಲ್ಲಿ ಚಲಿಸುತ್ತಿರುವ ರೈಲಿಗೆ, ಹೊರಗಿನ ನೆಲದಿಂದ ಜಿಗಿತು ಹಾರಿದಂತೆಯೇ ಇರಬೇಕು. ಯಾಕೆಂದರೆ ಅದು ವಿಜ್ಞಾನದ ಮೇಲಿನ ಯಾವುದೋ ಆಸಕ್ತಿಯ ಅಥವಾ ವ್ಯಾಮೋಹದ ಅಥವಾ ಅಜ್ಞಾನದ ಮೇಲಿನ ಅವೈಜ್ಞಾನಿಕ ಪ್ರಯತ್ನ. ಆದರೆ ಗುರಿಯು ಮಾರ್ಗವನ್ನು ಸಮರ್ಥಿಸುತ್ತದೆ ಎಂಬ ಮಾತಿನಂತೆ ನಾವೂ ಮುಂದುವರಿದೆವು. ದಿನಗಳು ಕಳೆದೊಡನೆ ನಮ್ಮೊಳಗೆ ಜಿಯೋಲಜಿ ಹಿನ್ನಲೆಯ ವಿಧ್ಯಾರ್ಥಿಗಳು ಯಾರು ಎಂಬುದು ಕಂಡುಹಿಡಿಯುದು ಸಂಕೀರ್ಣವಾಯಿತು (ನಿಮಗೆ ಏನು ಅರ್ಥವಾಯ್ತೋ ಗೊತ್ತಿಲ್ಲ, ಬಿಡಿ). ದಿನದಿಂದ ದಿನಕ್ಕೆ ಕಲಿಕೆಯು ಆಸಕ್ತಿದಾಯಕವಾಗಿತ್ತು. ಬಹುಃಶ ಅದಕ್ಕೆ ಕಾರಣ ವೈಯಕ್ತಿಕ ಆಸಕ್ತಿಯೋ ಅಥವಾ ವಿಷಯದ ಹೊಸತನವೋ ಎಂಬುದು ಗೊತ್ತಿಲ್ಲ (ಪಠ್ಯಕ್ರಮದಲ್ಲಿರುವ ಬಹುಪಾಲು ಗತಕಾಲದ ವೈಭವವನ್ನು ಹಲವರು ಹೀಯಾಳಿಸುವುದನ್ನು ಕೇಳಿರುವೆ, ಅದು ಖಂಡನೀಯ.).
ಈ ಜಗತ್ತು ಸೃಷ್ಟಿಯಾಗಿ 13.8 ಬಿಲಿಯನ್ ವರ್ಷಗಳು ಸಂದಿವೆ. ಅದರಲ್ಲಿ ನಮ್ಮ ಭೂಮಿಯ ಸೃಷ್ಟಿಗೆ 4.5 ಬಿಲಿಯನ್ ವರ್ಷದ ಇತಿಹಾಸವಿದೆ. ಪ್ರತಿ ಕ್ಷಣವೂ ನಮಗೆ ಏನನ್ನಾದರೂ ಹೊಸತನ್ನು ನೀಡುತ್ತಿದ್ದರೂ ಈ ಜಗತ್ತಿನ ಆದಿಯಿಂದ ನಮ್ಮನ್ನು ದೂರಮಾಡುತ್ತದೆ. ಏನನ್ನೋ ಕಳೆದುಕೊಳ್ಳುತ್ತೇವೆ. ಅದೇ ರೀತಿ ನಾವು ಕಾಲೇಜು ಸೇರಿದಾಗ ಒಂದು ವರ್ಷ ತಡವಾಗಿದ್ದರೆ ಕೆಲವು ಹಿರಿಯ ಪ್ರಾಧ್ಯಾಪಕರ ಪಾಠ ಕೇಳುವ ಅಥವಾ ಕಲಿಕೆಯ ವಿಷಯದ ಕೆಲವು ಅನುಭವ ಸತ್ವಗಳನ್ನು ಗ್ರಹಿಸುವ ಅವಕಾಶಗಳನ್ನು ನಾವು ಕಳೆದುಕೊಳ್ಳುತ್ತಿದ್ದೆವು ಎಂಬುದು ಈಗ ನನಗೆ ಅನಿಸುತ್ತಿದೆ. ನಾನು ಒಂದನೇ ವರ್ಷದ ಕೊನೆಯಲ್ಲಿದ್ದಾಗ ಹಿರಿಯ ಪ್ರಾದ್ಯಾಪಕಾರಾದ ಡಾ. ಕೆ. ಎಸ್. ಜಯಪ್ಪ ಸರ್ ಅವರು ವಯೋ-ನಿವೃತ್ತರಾದರು. ಒಂದೆರಡು ತಿಂಗಳ ಅಂತರದಲ್ಲಿ ವಿಭಾಗದ ಇನ್ನೋರ್ವ ಹಿರಿಯ ಪ್ರಾಧ್ಯಾಪಕಾರದ ಡಾ. ಶಿವಣ್ಣ ಸರ್ ಕೂಡ ವಯೋ-ನಿವೃತ್ತರಾದರು.
![]() |
ಪ್ರೊಫೆಸರ್ ಶಿವಣ್ಣ ಸರ್ |
ಅತಿಥಿ ಉಪನ್ಯಾಸಕರಾಗಿದ್ದ ಡಾ. ಜಿತಿನ್ ಜೋಸ್, ಡಾ. ಪ್ರವೀಣ್ ದೇಶಬಂಢಾರಿ, ಡಾ. ಅರುಣ್ ಕುಮಾರ್ ಮತ್ತು ಸಂಶೋಧನಾ ವಿಧ್ಯಾರ್ಥಿಯಾದ ಶ್ರೀ ಅಭೀಷೇಕ್ ರಾಜ್ ಇವರುಗಳೊಡನೆಯ ಒಡನಾಟ ಮರೆಯಲಾಗದು. ಪದವಿ ತರಗತಿ ತನಕ "ಸ್ಪರ್ಧಾತ್ಮಕ ಜಗತ್ತಿನ ವ್ಯಾಪ್ತಿಯೇನೆಂದು ನನಗೆ ಗೊತ್ತೆಂಬ" ಒಳಮನಸ್ಸಿನ ಹಮ್ಮು ಸ್ನಾತಕೋತ್ತರ ಶಿಕ್ಷಣ ತಲುಪಿದಾಗ ಸಂಪೂರ್ಣ ಕರಗಿತು. ಇಲ್ಲಿ ಎಲ್ಲಿ ನೋಡಿದರು ಕಾಣುವುದು ಸ್ಪರ್ಧಾತ್ಮಕ ಮನೋಭಾವ. ಆದರೆ ಅದರಲ್ಲಿ ಬಹುಪಾಲು ವ್ಯಕ್ತಿ ಕೇಂದ್ರೀಕೃತವಾಗಿತ್ತೆಂದು ನನಗೆ ಅನಿಸುವುದಿಲ್ಲ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಾನು ಗಮನಿಸಿದವರಲ್ಲಿ ಹೆಚ್ಚಿನವರು ಸಕಾರಾತ್ಮಕ ಸ್ಪರ್ಧಾದೃಷ್ಟಿಕೋನವನ್ನು ಹೊಂದಿದವರು. ಇದರ ಪ್ರಭಾವ ನನ್ನ ಮೇಲೂ ಬಂದಿದೆ. ಸಾಗರವಿನ್ನೂ ಬಲುದೂರ, ಸಾಗಬೇಕಿದೆ ಸಹಸ್ರಯೋಜನ ಎಂಬುದು ಪ್ರತಿಕ್ಷಣವೂ ಅರ್ಥವಾಗುತ್ತಿತ್ತು. ತರಗತಿಯಲ್ಲಿ ಸಹಪಾಠಿಗಳೊಡನೆ ಮಾತುಕತೆ, ಚರ್ಚೆ, ವೈಜ್ಞಾನಿಕ ಯೋಚನೆ, ಹರಟೆ, ವಾಗ್ವಾದ, ಭವಿಷ್ಯದ ಉದ್ಯೋಗ ಸಂಬಂಧಿ ಆತಂಕಗಳ ಹಂಚಿಕೆ ಹೀಗೆ ಆಶಯ ವಿನಿಮಯಗಳಿಗೆ ಯಾವ ಕೊರತೆಯೂ ಇರಲಿಲ್ಲ. ಹಾಗಿದ್ದೂ ಏನೋ ಎರಡು ವರ್ಷಗಳೂ ಅತೃಪ್ತವಾಗಿತ್ತು. ನಮ್ಮ ಕ್ಲಾಸ್ ಲೀಡರ್ ಆಗಿದ್ದ ಲಿಖಿತ್‌ನೊಡನೆ ಆಗುತ್ತಿದ್ದ ವಾಗ್ವಾದಗಳಿಗೆ ಲೆಕ್ಕವೇ ಇಲ್ಲ. ಅದೇ ರೀತಿ ಇನ್ನೂ ಹಲವರು. ಕೆಲವರೊಡನೆ ಅಸಮಾಧಾನ, ತೀವ್ರ ವಾಗ್ವಾದ, ಮುಂದುವರಿದು ಮುನಿಸುಗಳು ಆದಾಗ ಇತಿಹಾಸದ ಪುನರ್ ಆವರ್ತನೆ ಆಗುತ್ತದೆಯೋ ಎಂಬ ಸಂತೋಷ ಕಾಡುತ್ತಿರುತ್ತಿತ್ತು. ಯಾಕೆಂದರೆ ಸಾಮಾನ್ಯವಾಗಿ ನಾನು ಜಗಳದಲ್ಲಿ ಏರ್ಪಟ್ಟ ವ್ಯಕ್ತಿ ಮುಂದಿನ ದಿನಗಳಲ್ಲಿ ನನ್ನ ಆತ್ಮೀಯರಾಗಿರುವುದೇ ಅದಕ್ಕೆ ಉದಾಹರಣೆ. ಇಂದಿಗೂ ನನಗಿರುವ ಬೆರಳೆಣಿಕೆಯಷ್ಟು ಆತ್ಮೀಯರಲ್ಲಿ ಬಹುಪಾಲು ಅಥವಾ ಎಲ್ಲರೂ ಒಂದು ಕಾಲದಲ್ಲಿ ವಿರಸದಲ್ಲೇರ್ಪಟ್ಟಿರುವವರೆ...
Geology is a field subject, But who cares - ಭಾರತದ ಪ್ರಸಿದ್ಧ ಭೂವಿಜ್ಞಾನಿ ಡಾ. ಬಿ. ಪಿ. ರಾಧಾಕೃಷ್ಣರ ಈ ಮಾತನ್ನು ಜಯಪ್ಪ ಸರ್ ಯಾವುದೋ ಒಂದು ಸಂದರ್ಭದಲ್ಲಿ ಹೇಳಿದ್ದು ಅಚ್ಚಳಿಯದೆ ನೆನಪಿದೆ. ಫೀಲ್ಡ್ ಸಬ್‌ಜೆಕ್ಟ್ ಆಗಿದ್ದರೂ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಒಂದು ಛಲ ಅಗತ್ಯ ಇರುತ್ತದೆ. ಸಾಂಪ್ರದಾಯಿಕವಾದ ಸಾಮಾನ್ಯ ಶಿಕ್ಷಣ ಪದ್ಧತಿಯನ್ನು ಮೀರಿ ವಿಷಯ ಆಧಾರಿತ ಭೋದನಾ ರೀತಿ ಅನುಷ್ಠಾನಕ್ಕೆ ತರಲು ಅಸಾಮಾನ್ಯ ಧೈರ್ಯವೂ ಅಗತ್ಯ ಇದೆ. ಕೆಲವೊಮ್ಮೆ ವಿದ್ಯಾರ್ಥಿಗಳು ಈ ಮಾತನ್ನು ವಾದಿಸುವುದರ ಜೊತೆಯಲ್ಲಿ ಸಾಂಪ್ರದಾಯಿಕ ಕ್ಲಾಸ್‌ರೂಂ ಶಿಕ್ಷಣ ಸರಿಯಲ್ಲ ಎಂದು ಭಾವಿಸುತ್ತಾರೆ. ದೂರದ ಬೆಟ್ಟ ನುಣ್ಣಗೆ ಎಂಬಂತೆ ನಾವುಗಳು ಥಿಯರಿ ಕಲಿಕೆ ಇರಲೇ ಬಾರದು, ಪ್ರಾಕ್ಟಿಕಲ್ ಮಾತ್ರ ಬೇಕೆಂದು ವಾದಿಸುವುದು "ಉತ್ಪಾದನೆಯ ತಲೆಬಿಸಿ ಬೇಡ, ವ್ಯಾಪಾರದ ಲಾಭ ಸಾಕು" ಎನ್ನುವ ಹಾಗೆ ಇದೆ. ಸಾಂಪ್ರದಾಯಿಕ ಶಿಕ್ಷಣದಲ್ಲಿ ಇದ್ದುಕೊಂಡು ಪಠ್ಯೇತರವಾಗಿ ಪ್ರಾಯೋಗಿಕ ಶಿಕ್ಷಣಕ್ಕೆ ಅವಕಾಶ ನೀಡುವುದು ಅಗತ್ಯ. ನನ್ನ ಸ್ನಾತಕೋತ್ತರ ದಿನಗಳಲ್ಲಿ ನೆನಪಿರುವ ಕೆಲವು ಪ್ರಮುಖ ಕ್ಷಣಗಳೆಂದರೆ ಅದು ಸರ್ವೇ ಪ್ರಾಕ್ಟಿಕಲ್ಸ್.
![]() |
ಸರ್ವೇ ಲ್ಯಾಬ್ |
ಶಿವಣ್ಣ ಸರ್ ಆಸಕ್ತಿಯಿಂದ ನಮ್ಮನ್ನು ಕ್ಯಾಂಪಸ್‌ನಲ್ಲೆಲ್ಲಾ ಸರ್ವೇ ಲ್ಯಾಬ್‌ನ ಚೈನ್ ಸರ್ವೇ ಪ್ರಾಕ್ಟಿಕಲ್ಸ್ ಮಾಡಿಸುತ್ತಿದ್ದರು. ಅವರು ನಿವೃತ್ತರಾದಾಗ ಅವರ ಬದಲಿಗೆ ಪ್ರವೀಣ್ ಸರ್ ಸರ್ವೇ ಲ್ಯಾಬ್ ಮತ್ತಷ್ಟೂ ಉತ್ಸಾಹಿಯಾಗಿ ಮುನ್ನಡೆಸಿದರು.
![]() |
ಪ್ರವೀಣ್ ಸರ್ ಮತ್ತು ನಾವು |
ಅವರ ಉತ್ಸಾಹದ ಎದುರು ನಾವು ೨೨ ಜನರ ಉತ್ಸಾಹ ಏನೂ ಆಗಿರಲಿಲ್ಲ. ಆದರೂ ಅವರ ಸರ್ವೇ ಲ್ಯಾಬ್ ನನಗಂತೂ ಲ್ಯಾಬ್ ಮೇಲಿನ ಆಸಕ್ತಿ ಹೆಚ್ಚಿಸುತ್ತಿತ್ತು. ನನ್ನ ಅನಿಸಿಕೆಯ ಪ್ರಕಾರ ನನ್ನ ಇತರ ಸಹಪಾಠಿಗಳಿಗೂ ಈ ಲ್ಯಾಬ್ ಮರೆಯಲಾಗದ ಸವಿನೆನಪುಗಳನ್ನು ನೀಡಿರಬಹುದು.
ನಾವು ಒಂದನೇ ವರ್ಷದಲ್ಲಿದ್ದಾಗ ಶಿವಣ್ಣ ಸರ್ ಆಸಕ್ತಿ ವಹಿಸಿ ನಮ್ಮನ್ನು ಉಡುಪಿ ತೀರದ ಮಲ್ಪೆ ಬೀಚ್‌ಗೆ ಸಮೀಪವಿರುವ ಸೈಂಟ್ ಮೇರೀಸ್ ದ್ವೀಪಕ್ಕೆ ನಮ್ಮನ್ನು ಕರೆದುಕೊಂಡುಹೋದರು. ಇದು ಕರ್ನಾಟಕದಲ್ಲಿರುವ ನಾಲ್ಕು ಪ್ರಮುಖ ಜಿಯೋಲಜಿಕಲ್ ಸ್ಮಾರಕಗಳಲ್ಲಿ ಒಂದಾಗಿದೆ. ಆ ಪ್ರದೇಶದ ಭೂವಿಜ್ಞಾನದ ಪ್ತತ್ಯಕ್ಷತೆಯನ್ನು ಕಂಡರಿಯಲು ನಮಗೆ ಸಹಕಾರಿಯಾಗಿತ್ತು. ವಿದ್ಯಾರ್ಥಿಗಳಿಗೆ ಹೆಚ್ಚಿನ ಆರ್ಥಿಕ ಹೊರೆಯಾಗುವುದನ್ನು ತಪ್ಪಿಸಲು ಶಿವಣ್ಣ ಸರ್‌ನ ನೀರ್ದೇಶನದಂತೆ ಹಾಸ್ಟೆಲ್‌ನಿಂದ ಬೆಳಿಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ ವಿಶೇಷವಾಗಿ ಕೊಂಡೊಯ್ದಿದ್ದೆವು. ಕೆಲವು ಸಹಪಾಠಿಗಳಿಗೆ ಈ ಕಾರ್ಯ ಖುಷಿಯನ್ನು ನೀಡುವುದರ ಬದಲಿಗೆ ಬೇಸರವನ್ನು ನೀಡಿದ್ದರೂ, ನಮ್ಮ ಪ್ರಯಾಣದ ಸಮಯ ಪಾಲನೆಗೆ ಮತ್ತು ನಾವು ಆಹಾರದ ಸಮಯದಲ್ಲಿ ಹೋಟೆಲ್‌ಗಳು ಸುಲಭ ಇರುವುದಿಲ್ಲ ಎಂಬ ವಿಷಯ ಕಣ್ಣಾರೆ ಕಂಡಾಗ ಅವರಿಗೂ ಸಂತಸವಾಗಿರಬಹುದು. ಬೆಳಗ್ಗಿನ ಮತ್ತು ಮಧ್ಯಾಹ್ನದ ಆಹಾರ ನಮ್ಮ ಅಗತ್ಯಕ್ಕಿಂತ ಜಾಸ್ತಿ ಇದ್ದವುದರಿಂದ ನಮ್ಮ ಆಹಾರ ಸಮಯದಲ್ಲಿ ನಮಗೆ ಎದುರಾದ ಪ್ರವಾಸಿಗರು ಮತ್ತು ಕೆಲವು ಸ್ಥಳೀಯರಿಗೆ ಹಂಚಿದೆವು. ಆ ಸಂದರ್ಭ ತುಂಬಾ ಖುಷಿ ನೀಡಿತು.
(ಬರಹ ಮುಂದುವರಿಯಲಿದೆ... ಭಾಗ-02 ಶೀಘ್ರದಲ್ಲಿ..!)
👌👌👌👌👊
ಪ್ರತ್ಯುತ್ತರಅಳಿಸಿಧನ್ಯವಾದ...
ಅಳಿಸಿಉತ್ತಮವಾದ ಲೇಖನ. ನಿಮ್ಮ ಈ ಲೇಖನ ಓದಿ ನನಗೆ ನನ್ನ ವಿಶ್ವವಿದ್ಯಾಲಯದ ನೆನಪು ಕಣ್ಣ ಮುಂದೆ ಬರುತ್ತದೆ. ಈ ತರಹದ ಬರಹಗಳ ನಿರೀಕ್ಷೆಯಲ್ಲಿ ನಿಮ್ಮ ಅಭಿಮಾನಿ.
ಪ್ರತ್ಯುತ್ತರಅಳಿಸಿತುಂಬಾ ಸಂತೋಷ... ದೇವರು ಆಶಿರ್ವದಿಸಲಿ...🙏
ಅಳಿಸಿ