ಹಗಲು      ರಾತ್ರಿ

ಶುಕ್ರವಾರ, ಆಗಸ್ಟ್ 27, 2021

ಪದವಿ ಪಯಣ ಅರ್ಧ ಹಾದಿ ಕ್ರಮಿಸಿದಾಗ...

ಇಂದು ಬೆಳಿಗ್ಗೆ ಪರೀಕ್ಷೆಯ ಬಿಸಿಯಲ್ಲಿ ಟಿವಿಯಲ್ಲಿ ವಾರ್ತೆ ನೋಡುತ್ತಾ ಬಿಸಿಯಾದ ಚಹಾ ಕುಡಿಯುತ್ತಿದ್ದೆ. ಕೇರಳದಲ್ಲಿ ಪಿಣರಾಯಿ ವಿಜಯನ್ ಸರಕಾರ ಎರಡನೇ ಬಾರಿ ಆಡಳಿತಕ್ಕೆ ಬಂದು ಇಂದಿಗೆ ೧೦೦ ದಿನ ಆಯಿತು ಅಂತೆ. ಮುಂದಿನ ತಿಂಗಳಲ್ಲಿ ಈ ಕಳೆದ ನೂರು ದಿನಗಳಲ್ಲಿ ಸರಕಾರದ ಕಾರ್ಯಚಟುವಟಿಕೆಗಳನ್ನು ಒಳಗೊಂಡ ಪ್ರಗತಿಪಟ್ಟಿ ಬಿಡುಗಡೆ ಮಾಡುವುದು ಎಂದು ತಿಳಿಯಿತು. ಪರೀಕ್ಷೆ ಬಿಸಿಯಲ್ಲಿ ಇದೆಲ್ಲಾ ಒಂದು ಸುದ್ದೀಯೇ ಅಲ್ಲ‌. ಅಷ್ಟರಲ್ಲಿ... 🤔, ಇಂದು ನಡೆಯಲಿರುವ ಪರೀಕ್ಷೆ ನನ್ನ ಬಿ.ಎಸ್ಸಿಯ ಮೂರನೇ ಸೆಮೆಸ್ಟರ್‌ನ ಕೊನೆಯ ಪರೀಕ್ಷೆ; ರಸಾಯನ ಶಾಸ್ತ್ರ. ಇಂದಿಗೆ ಮೂರನೇ ಸೆಮೆಸ್ಟರ್‌ಗೆ ಅಧಿಕೃತ ತೆರೆ ಬಿದ್ದಂತೆ. ೨೦೨೧ ರ ಏಪ್ರಿಲ್ ೩ ರಂದು ಶುರುವಾದ ಪರೀಕ್ಷೆ ಏಪ್ರಿಲ್ ೨೭ ಕ್ಕೆ ಕೊನೆಯಾಗಬೇಕಿತ್ತು. ಆದರೆ, ನಮ್ಮ ಕರೋನ ಮಾರಿಯ ಅಲೆ ಸಣ್ಣದೋ...! ಇಲ್ಲ. ಮತ್ತೆಯೂ ಭರ್ತಿ ನಾಲ್ಕು ತಿಂಗಳು. ಅಂದರೆ ಇಂದು (ಆಗಸ್ಟ್ ೨೭, ೨೦೨೧) ಮೂರನೇ ಸೆಮೆಸ್ಟರ್‌ನ ಬಿ.ಎಸ್ಸಿ ಪರೀಕ್ಷೆ ಮುಗಿಯಿತು. ಒಟ್ಟು ಆರು ಸೆಮೆಸ್ಟರ್‌ನ ಬಿ.ಎಸ್ಸಿಯಲ್ಲಿ ಸರಿ ಅರ್ಧ ಅವಧಿ ಮುಗಿಯಿತು. ಇನ್ನೂ ಮೂರು ಸೆಮೆಸ್ಟರ್ ಬಾಕಿ....!😇
ಹಾಗಾಗಿ, ಸರಕಾರಕ್ಕೆ ಮಾತ್ರವಲ್ಲ; ವಿದ್ಯಾರ್ಥಿಗಳಿಗೂ ಇದು ಪ್ರಗತಿ ಪಟ್ಟಿ ಬಿಡುಗಡೆ ಮಾಡುವ ಸಕಾಲ... ತಡವಾದರೆ ಜಾಗ್ರತೆ, ನಾಳೆ ಏನುಂಟೋ... ಏನಿಲ್ಲವೋ...😅

೨೦೧೯ ರಲ್ಲಿ ಪಿ.ಯು.ಸಿ ಶಿಕ್ಷಣ ಮುಗಿಸಿದ ನಂತರ ಹೆಚ್ಚು ಆಲೋಚನೆ, ಒತ್ತಡ ಏನೂ ಇಲ್ಲದೆ ಜೂನ್ ತಿಂಗಳಲ್ಲಿ ಎನ್ನೆಂಸಿಯಲ್ಲಿ ಬಿ.ಎಸ್ಸಿ (ಪಿ.ಸಿ‌.ಎಂ) ಗೆ ಪ್ರವೇಶ. ಮನಸ್ಸು ಹಿಂದೆಯೇ ನಿಗದಿಪಡಿಸಿದಂತೆ ಎನ್.ಸಿ‌.ಸಿ ಪ್ರವೇಶವೂ ಸಕಾಲಕ್ಕೆ ಆಯಿತು.
ಎನ್ನೆಂಸಿ ಸುಳ್ಯ - ಒಂದು ನೋಟ

ಪದವಿಯಲ್ಲಿ ಮೊದಲ ನಾಲ್ಕು ಸೆಮೆಸ್ಟರ್‌ನಲ್ಲಿ ಒಟ್ಟು ೭ ವಿಷಯಗಳು (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಕನ್ನಡ, ಇಂಗ್ಲೀಷ್, ಆಯ್ಕೆಯ ವಿಷಯ (Elective Subject), ಕಡ್ಡಾಯ ಸಾಮಾನ್ಯ ಶಿಕ್ಷಣ (Compulsory General Studies)). 

ನನ್ನ ಬ್ಯಾಚ್‌ನಿಂದ ಮಂಗಳೂರು ವಿಶ್ವವಿದ್ಯಾಲಯವು ಪದವಿ ತರಗತಿಗೆ ಹೊಸ ಮಾದರಿಯ ಆಯ್ಕೆ ಆಧಾರಿತ ಪಠ್ಯಕ್ರಮವನ್ನು (CBCS - Choice Based Credit System) ಅನುಷ್ಠಾನಕ್ಕೆ ತಂದಿತು. ಇದರ ಪರಿಣಾಮವಾಗಿ ಮೊದಲ ನಾಲ್ಕು ಸೆಮೆಸ್ಟರ್‌ನಲ್ಲಿ ೫೦ ಅಂಕದ ಒಂದು ಹೆಚ್ಚುವರಿ ವಿಷಯ ಕಲಿಯುವ ಭಾಗ್ಯ ನಮ್ಮದಾಯಿತು...😌. ಈ ಪ್ರಕಾರ ನಾಲ್ಕನೇ ಸೆಮೆಸ್ಟರ್‌ನಲ್ಲಿ ಬೇರೆ ಡಿಪಾರ್ಟ್ಮೆಂಟ್‌ನ ಒಂದು ವಿಷಯವನ್ನು ಆಯ್ಕೆ ಮಾಡಬಹುದಾಗಿದೆ. ಇವುಗಳ ಹೊರತಾಗಿ ಹೊಸ ಪಠ್ಯಕ್ರಮದಲ್ಲಿ ಉಲ್ಲೇಖನೀಯವಾದ ಪ್ರತ್ಯಕ್ಷ ಬದಲಾವಣೆ ಏನೂ ನನಗೆ ಗೋಚರಿಸಿಲ್ಲ ಅಥವಾ ಅರ್ಥವಾಗಿಲ್ಲ. ಆದರೆ, ವಿಶ್ವವಿದ್ಯಾಲಯದ ಪ್ರಕಾರ ಹೊಸ ಪಠ್ಯಕ್ರಮದ ಅನುಷ್ಠಾನದಿಂದ ಪದವಿ ಶಿಕ್ಷಣ, ಪರೀಕ್ಷೆ ಹಾಗೂ ಪದವಿ ಅಂಕಗಳ ಆಂತರಿಕ ಗುಣಮಟ್ಟ ಮತ್ತು ಪದವಿಯ ಘನತೆಯು ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಲಿದೆ. ಶ್ರೀಕೃಷ್ಣ ಪರಮಾತ್ಮ ಗೀತೆಯಲ್ಲಿ ಹೇಳಿದಂತೆ, ಕರ್ಮವನ್ನು ಮಾಡುವುದು ನಮ್ಮ ಕರ್ತವ್ಯ; ಕರ್ಮ ಫಲದ ಕುರಿತು ಚಿಂತೆ ಮಾಡಬಾರದು. ಹಾಗೆಯೇ ಪಠ್ಯಕ್ರಮ ಯಾವುದಿದ್ದರೂ ಶಿಕ್ಷಣಾರ್ಥಿಯು ವಿಚಲಿತನಾಗದೆ ವ್ಯಾಸಾಂಗದಲ್ಲಿ ಕೇಂದ್ರೀಕೃತನಾಗಿರಬೇಕು (ಅಂತೆ...😉). ನಾವು ಗಳಿಸಿದ ಜ್ಞಾನ, ಬೆಳೆಸಿದ ವಿಜ್ಞಾನ, ಕಳೆದುಕೊಂಡ ಅಜ್ಞಾನ ಇವುಗಳನ್ನೆಲ್ಲ ಕಾಲವೇ ನಿರ್ಧರಿಸುತ್ತದೆ; ಕಾಲ ಮಾತ್ರ ನಿರ್ಧರಿಸಬೇಕು (ಕರೋನ ಕಾಲ ಶಿಕ್ಷಣವನ್ನು ಅಕ್ಷರಶಃ). 
ಕಾಲೇಜು ವಿದ್ಯಾರ್ಥಿ ಸಂಘದ
ಉದ್ಘಾಟನೆಗೆ ಸಿದ್ಧವಾದ ವೇದಿಕೆ


ಒಂದನೇಯ ಸೆಮೆಸ್ಟರ್ ಸಮೃದ್ಧವಾಗಿ ಆರಂಭ ಆಗಿತ್ತು. ಕಳೆದ ವರ್ಷದ ತನಕ ಗಣಿತ ವಿಷಯಕ್ಕೆ ಪ್ರಾಯೋಗಿಕ ಶಿಕ್ಷಣ ಇರಲಿಲ್ಲ (Mathematics Practical). ಈ ಬಾರಿ ವಿಶ್ವವಿದ್ಯಾಲಯ ಗಣಿತ ಲ್ಯಾಬ್‌ನ್ನೂ ಶುರು ಮಾಡಿತು. ವಿಶ್ವವಿದ್ಯಾಲಯದ ಈ ನಿರ್ಧಾರ ಎಲ್ಲಾ ಬಿ.ಎಸ್ಸಿ ವಿದ್ಯಾರ್ಥಿಗಳ ಆಂತರಿಕ ಸಂತೋಷಕ್ಕೂ ಕಾರಣವಾಗಿರಬಹುದು ಎಂಬುದರಲ್ಲಿ ಎರಡು ಮಾತಿಲ್ಲ. ದೈನಂದಿನ ತರಗತಿಗಳು, ಪ್ರಯೋಗಿಕ ತರಗತಿಗಳು ಎನ್.ಸಿ.ಸಿ ಇತ್ಯಾದಿ ಎಲ್ಲಾ ವಿವರಿಸಲು ಆಗದಷ್ಟು ಸಮೃದ್ಧವಾಗಿ ನಡೆಯಿತು ಎಂಬುದಕ್ಕೆ ಸಂಶಯವಿಲ್ಲ.
ಜೈಹಿಂದ್

ಒಂದನೇ ಸೆಮೆಸ್ಟರ್ ಪರೀಕ್ಷೆಯೂ ಕಾಲವಿಧಿತದಂತೆ ಯಶಸ್ವಿಯಾಗಿ ನಡೆಯಿತು. ಎರಡನೇ ಸೆಮೆಸ್ಟರ್ ತರಗತಿಯೂ ಚೆನ್ನಾಗಿ ನಡೆಯಿತು.
ಸಾಮಾನ್ಯವಾಗಿ ಗಡಿನಾಡ ವಿದ್ಯಾರ್ಥಿಗಳ ಪ್ರಯಾಣ ಗ್ರಾಮೀಣ ರಸ್ತೆಗಳ ಸಮಸ್ಯೆ ತುಂಬಾ ಜಾಸ್ತಿ. ಸ್ವತಃ ಸಮವಸ್ತ್ರಧಾರಿಯಾದ ಬಸ್ ಚಾಲಕ ಅರಣ್ಯ ರಸ್ತೆಯ ಬದಿಯಲ್ಲಿ ಬಸ್ ನಿಲ್ಲಿಸಿ, ಸ್ವಯಂ-ಪ್ರೇರಿತ ವಿದ್ಯಾರ್ಥಿಗಳ ಸಹಕಾರದಿಂದ ಕನಿಷ್ಠ ಪಕ್ಷ ಬಸ್‌ನ ಚಕ್ರ ಹಾದುಹೋಗುವಷ್ಟಾದರೂ ರಸ್ತೆ ರಿಪೇರಿ ಮಾಡುವ ಸಂದರ್ಭ ಎದುರಾಗುವ ಸ್ಥಿತಿಗೆ ಉತ್ತರವೇನು? ಇಡೀ ರಸ್ತೆಯ ಹೊಂಡ ಮುಚ್ಚಲು ಸಮಯ ಮತ್ತು ಶಕ್ತಿ ನಮಗೆ ಇಲ್ಲ. ಇಂತಹ ಒಂದು ಸಂದರ್ಭಕ್ಕ  ಕಾರಣ ನಮ್ಮ ಸಾಮಾಜಿಕ ಕಾಳಜಿ ಎಂದು ನಾನು/ನಾವು ವಾದಿಸುವುದಿಲ್ಲ. ಬದಲಾಗಿ, ಅದು ನಾನು ಅನುಭವಿಸುವ ನಮ್ಮ ಪ್ರಯಾಣದ ಕಷ್ಟದಿಂದ ಮಾಡಿದ ಕಿರು ಯತ್ನ. ೨೦೧೯ ರ ಆಗಸ್ಟ್ ೧೫ ರಂದು ನಾವು ಕೆಲವು ಡ್ರೈವರ್ ಅಣ್ಣನ ಸಹಕಾರದಿಂದ ರಸ್ತೆಗಿಳಿದಾಗ...

ಸುಳ್ಯ-ಕೋಲ್ಚಾರ್-ಬಂದಡ್ಕ ರಸ್ತೆಯಲ್ಲಿ
ಕಾಲೇಜು ಬಸ್ ವತಿಯಿಂದ ಬೃಹತ್
ಹೊಂಡಗಳನ್ನು ಕೈಲಾದ ಮಟ್ಟಿಗೆ
ಮುಚ್ಚುವ ಕಿರುಪ್ರಯತ್ನ

ಇಂತಹ ಗುಳಿಗಳು ಕೋಲ್ಚಾರ್ ರಸ್ತೆಯಲ್ಲಿ
ಇಂದಿಗೂ ಇದೆ.
ಅದರ ವ್ಯಾಪ್ತಿ ಹಿರಿದಾಗುತ್ತಾ ಇದೆ.


ಎರಡನೇ ಸೆಮೆಸ್ಟರ್‌ನಲ್ಲಿರುವಾಗ, ಮಂಗಳೂರು ಆಕಾಶವಾಣಿಯು ರಾಷ್ಟ್ರೀಯ ಯುವ ದಿನದ ಪೂರ್ವಭಾವಿಯಾಗಿ ಡಿಸೆಂಬರ್‌ನಲ್ಲಿ ಪದವಿ ವಿದ್ಯಾರ್ಥಿಗಳಿಗೆ ನಡೆಸಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ನನ್ನ ಸಹಪಾಠಿ, ಗೆಳೆಯ ಜಗದೀಶ್‌ನ ಜೊತೆಯಲ್ಲಿ ಕಾಲೇಜನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಜಗದೀಶನು ಅರಂತೋಡಿನಿಂದ ಸುಳ್ಯ ಪುತ್ತೂರು ಮಾರ್ಗವಾಗಿಯೂ ನಾನು ಕಾಸರಗೋಡು-ತಲಪ್ಪಾಡಿ ಮಾರ್ಗವಾಗಿಯೂ ಮಂಗಳೂರಿಗೆ ಹೊರಡುವುದು ನಮ್ಮ ಯೋಜನೆ. ಆ ದಿನ ಬೆಳಿಗ್ಗೆ 05.00 ಗಂಟೆಗೆ ನಾನು ಬಂದಡ್ಕದಿಂದ ಮಂಗಳೂರಿನ ಬಸ್ ಹತ್ತಿದೆ. ಶಿಕ್ಷಣದ ಭಾಗವಾಗಿ ಒಂಭತ್ತನೆಯ ತರಗತಿಯಲ್ಲಿ ಇರುವಾಗ ಒಮ್ಮೆ ತಿರುವನಂತಪುರಂಗೂ ಹತ್ತನೆಯ ತರಗತಿಯಲ್ಲಿ ಇರುವಾಗ ಎರಡು ಬಾರಿ ಬೆಂಗಳೂರಿಗೆ ಇವು ಮೂರು ಮಾತ್ರ ನಾ ಮಾಡಿದ ದೀರ್ಘ ಪ್ರಯಾಣ. ಹಾಗೆಂದು ನೂರು ಕಿಲೋಮೀಟರ್ ದೂರದ ಮಂಗಳೂರು ದೂರಪಯಣ ಎಂದೇನೂ ಅಲ್ಲ‌. ಮಂಗಳೂರು ನಗರ ನನ್ನ ಪಾಲಿಗೆ ಅಪರಿಚಿತ ಸ್ಥಳ. ಹೆಚ್ಚು ಕಡಿಮೆ ಹತ್ತು ವರ್ಷದ ಹಿಂದೆ ತೀರಾ ಚಿಕ್ಕವನಿದ್ದಾಗ ಅಪ್ಪನ ಜೊತೆಯಲ್ಲಿ ಒಂದೋ ಎರಡೋ ಬಾರಿ ಮಾತ್ರ ಮಂಗಳೂರಿಗೆ ಹೊಗಿದ್ದೆ. ಅಷ್ಟು ಮಾತ್ರ. ಬಳಿಕ ಇದೀಗ ಮೊದಲ ಬಾರಿಗೆ ಒಬ್ಬನೇ ಮಂಗಳೂರಿಗೆ ಪಯಣ. ಹೈಸ್ಕೂಲಿನಲ್ಲಿ ಇರುವಾಗ ಅದೆಷ್ಟೋ ಸಲ ಶೈಕ್ಷಣಿಕ ಅಗತ್ಯಗಳಿಗಾಗಿ ಒಬ್ಬನೇ ಕಾಸರಗೋಡಿಗೆ ಹೋಗಿ ಬರುತ್ತಿದೆ. ಹಾಗಾಗಿ ಒಬ್ಬನೆ ಪ್ರಯಾಣ ಮಾಡುವಲ್ಲಿ ಯಾವುದೇ ಹಿಂಜರಿಕೆ ಖಂಡಿತ ಇರಲಿಲ್ಲ‌. ಮತ್ತೆ ಹೇಗೂ ಕೈಯಲ್ಲೊಂದು ಮೊಬೈಲ್ ಹಾಗೂ ಮೊಬೈಲ್‌ನ ಒಳಗೆ ಗೂಗಲ್ ಮ್ಯಾಪೆಂಬ ವಿಶ್ವನಕ್ಷೆಯೇ ಇದೆ ಅಲ 😅. ಮಂಗಳೂರಿನಲ್ಲಿ ನನ್ನ ಗುರಿ ಯೂನಿವರ್ಸಿಟಿ ಕಾಲೇಜು. ಮನಸ್ಸಿನಲ್ಲಿ ಯೂನಿವರ್ಸಿಟಿ ಕಾಲೇಜು ಎಲ್ಲಿ ಸಿಗಬಹುದು ಎಂಬ ನಕ್ಷೆಯೂ ಹಾಕಿದ್ದೆ. ಬಸ್ ಮಂಗಳೂರು ನಗರ ಸಮೀಪಿಸಿದಂತೆ ಮೊಬೈಲ್‌ನಲ್ಲಿ ಗೂಗಲ್ ಮ್ಯಾಪ್ ತೆರೆದಿಟ್ಟೆ. ನನ್ನ ಗುರಿ ತಲುಪಲು ಬೆರಳೆಕೆಯಷ್ಟು ಕಿಲೋಮೀಟರ್ ಮಾತ್ರ ಬಾಕಿ. ಒಂದು ಹಂತ ತಲುಪಿದಾಗ ಯೂನಿವರ್ಸಿಟಿ ಕಾಲೇಜ್‌ ನಿಲ್ದಾಣಕ್ಕೆ ಇನ್ನು ೨೦೦ ಮೀ. ದೂರ ಎಂದು ತಿಳಿಯಿತು. ಬಸ್‌ನಲ್ಲಿ ದೊಡ್ಡ ಜನದಟ್ಟನೆ ಇರಲಿಲ್ಲ, ರಸ್ತೆಯ ಟ್ರಾಫಿಕ್‌ನಿಂದಾಗಿ ಬಸ್‌ಗೆ ಹೆಚ್ಚು ವೇಗವೂ ಇರಲಿಲ್ಲ. ಹಾಗಾಗಿ ನಾನು ಬಸ್‌ನಲ್ಲಿ ಸುಖಾಸೀನನಾಗಿದ್ದೆ. ರಸ್ತೆಯ ಬದಿಯ ಅಂಗಡಿಗಳ ಬೋರ್ಡ್‌ ಎಲ್ಲಾ ನೋಡುತ್ತಿದ್ದೆ. ಮೊಬೈಲ್ ಬಿಗಿಯಾಗಿ ಹಿಡಿದಿದ್ದೆ. ಬಸ್ ಇಳಿಯಲು ಮಾನಸಿಕವಾಗಿ ಸಿದ್ದನಾಗಿದ್ದೆ. ಆದರೆ ನಡೆದದ್ದು ಅನಿರೀಕ್ಷಿತ....!!😇
ಮಂಗಳೂರು ಆಕಾಶವಾಣಿ ಬಳಗ,
ಗೆಳೆಯ ಜಗದೀಶನೊಂದಿಗೆ


ಮೊಬೈಲ್‌‌ನ ನಕ್ಷೆಯಲ್ಲಿ ಕಾಣುತ್ತಿದ್ದೆ ೨೦೦ ಮೀಟರ್ ದೂರ ಮತ್ತೆ ಕಡಿಮೆ ಆಗಲಿಲ್ಲ. ಸ್ವಲ ಹೊತ್ತಲ್ಲಿ ೨೫೦, ೩೦೦, ೫೦೦ ಹೀಗೆ ಹೆಚ್ಚುತ್ತಾ ಹೋಯಿತು. ದೂರ ಜಾಸ್ತಿ ಆದಂತೆ ಎದೆಬಡಿತ ಜಾಸ್ತಿ ಆಯಿತು. ಬಹುಶಃ ಬಸ್ ಸುತ್ತಿಬಳಸಿ ನನ್ನ ಗುರಿ ತಲುಪಬಹುದು ಎಂಬ ನಿರೀಕ್ಷೆ ನನ್ನಲ್ಲಿ ಇತ್ತು. ಯೂನಿವರ್ಸಿಟಿ ಕಾಲೇಜು ಎದುರುಗಡೆ ಬಸ್ ನಿಲ್ಲಿಸುತ್ತದೆ ಎಂಬ ಮಾಹಿತಿ ನನಗೆ ಹಿಂದಿನ ದಿನ ಸಿಕ್ಕಿತು ಕೂಡ. ಆ ಕಾರಣದಿಂದ ನಾನು ಬಸ್‌ನಿಂದ ಇಳಿಯುವ ಪ್ರಯತ್ನ ಮಾಡಲಿಲ್ಲ. ದೂರ ಹೆಚ್ಚಾದಂತೆ ಬಸ್‌ನಲ್ಲಿದ ಉಳಿದ ಎಲ್ಲಾ ಪ್ರಯಾಣಿಕರು ಬಸ್‌ನಿಂದ ಇಳಿದಿದ್ದರು. ಈಗ ನನಗೆ ಏನೋ ತಪ್ಪಾಗಿದೆ ಎಂಬ ಸಂದೇಹ ಬಲವಾಯಿತು‌. ತಡ ಮಾಡದೆ ಬಸ್ ನಿರ್ವಾಹಕ ಮತ್ತು ಬಸ್ ಚಾಲಕರ ಬಳಿ ಹೋದೆ. ವಿಷಯ ಹೇಳಿದಾಗ, ನಾನು ಇಳಿಯಬೇಕಿದ್ದ ನಿಲ್ದಾಣದ ಸಮೀಪದ ಮೂಲಕ ಬಸ್ ಇದೀಗ ಮಂಗಳೂರು ಬಸ್ ನಿಲ್ದಾಣ ತಲುಪಿದೆ ಎಂದರು. ಇದೀಗ ನಾನು ೨-೩ ಕಿಲೋಮೀಟರ್ ಹಿಂದೆ ವಾಪಾಸು ಹೋಗಬೇಕಿತ್ತು. ಗಂಟೆ ಆಗ ೦೮.೦೦. ಕಾಲೇಜು ತಲುಪಲು ನನಗೆ ಇನ್ನೂ ಒಂದೂವರೆ ಗಂಟೆ ಸಾವಕಾಶ ಇತ್ತು. ಗೆಳೆಯ ಜಗದೀಶ್ ಆಗ ಕಾಲೇಜು ತಲುಪಿದ್ದ. ಸಮಯಾವಕಾಶ ಇದ್ದ ಕಾರಣದಿಂದ ನನ್ನ ದಾರಿ ತಪ್ಪಿಸಿದ ಮೊಬೈಲ್‌ನಲ್ಲೇ ದಾರಿ ನೋಡಿಕೊಂಡು ಅಷ್ಟು ದೂರ ನಡೆದುಕೊಂಡೇ ಹೋದೆ. ರಸಪ್ರಶ್ನೆ ಕಾರ್ಯಕ್ರಮ ಚೆನ್ನಾಗಿತ್ತು. 

ಆಕಾಶವಾಣಿ ರಸಪ್ರಶ್ನೆ ಕಾರ್ಯಕ್ರಮ

ಯೂನಿವರ್ಸಿಟಿ ಕಾಲೇಜ್, ಮಂಗಳೂರು


ಇದರ ವಿವರಣೆಯ ಮುಂಚೆ ಕಾರ್ಯಕ್ರಮದ ವಿವರಣೆಯಲ್ಲಿ ಸ್ವಾರಸ್ಯ ಇರದು. ೩ ಗಂಟೆಯ ಸುಮಾರಿ ಕಾರ್ಯಕ್ರಮ ಮುಗಿಸಿ ಕಾಲೇಜಿನಿಂದ ಊರಿಗೆ ಹೊರಡಲು ಸಿದ್ದರಾದೆವು. ಇದೀಗ ನನಗೆ ಕಾಸರಗೋಡು ಬಸ್ ಹಿಡಿಯುವ ತವಕ, ಜಗದೀಶನಿಗೆ ಸುಳ್ಯ ಬಸ್ ಹಿಡಿಯುವ ತವಕ. ಮೊದಲು ಯಾರ ಬಸ್ ಬರುವುದೋ ಅವರು ಹಿಂದೆ-ಮುಂದೆ ನೋಡದೆ ಬಸ್ ಏರಲಿ ಎಂದೇ ನಾವು ನಿಗದಿ ಮಾಡಿದ್ದೆವು. ಇದೀಗ ನನ್ನ ಮುಂದೆ ಇನ್ನೊಂದು ಸವಾಲು. ರಸ್ತೆ ಬದಿ ನಿಂತಿದ್ದೆವು. ನಗರದಿಂದ ಬಸ್ ಹೊರಹೋಗುವುದು ಯಾವ ಭಾಗಕ್ಕೆ, ನಾವು ರಸ್ತೆಯ ಯಾವ ಭಾಗದಲ್ಲಿ ನಿಲ್ಲಬೇಕೆಂಬುದು ಗೊಂದಲ. ಜಗದೀಶ ಸರಿಯಾದ ದಿಕ್ಕನ್ನೇ ಹೇಳಿದೆ. ನಾನಂತೂ ವಿರೋಧ ಪಕ್ಷದವ. ಹಾಗಾಗಿ ನನಗೆ ಮತ್ತೂ ಗೊಂದಲ. ಗೂಗಲ್ ಮ್ಯಾಪ್ ಕೂಡ ಅಲ್ಲಿ ನನಗೆ ಉಪಕಾರಿ ಆಗಲಿಲ್ಲ. ನನ್ನ ವಾದಕ್ಕೆ ಪುರಾವೆ ಇಲ್ಲದ ಕಾರಣ ನಾನು ಜಗದೀಶನ ಜೊತೆ ಅವ ಹೇಳಿದ ರಸ್ತೆ ಬದಿ ನಿಂತೆ. ಅವನು ಹೋಗಬೇಕಾದ ಸುಳ್ಯ ಬಸ್ ಬಂತು. ಆದರೆ ಬಸ್ ನಿಲ್ಲಿಸಲಿಲ್ಲ. ಸ್ವಲ್ಪ ಹೊತ್ತಲ್ಲಿ ಕಾಸರಗೋಡು ಬಸ್ ಬಂತು. ನಾನು ಹತ್ತಿದೆ. ನಂತರ 5-10 ನಿಮಿಷದಲ್ಲಿ ಅವನಿಗೂ ಬಸ್ ಸಿಕ್ಕಿತ್ತು. ಆರಾಮವಾಗಿ ಮನೆಗೆ ತಲುಪಿದೆವು.

೨೦೨೦ ರ ಫೆಬ್ರವರಿ ತಿಂಗಳಲ್ಲಿ ವಿಜ್ಞಾನ ವಿಭಾಗದಿಂದ INSPIRO-2k20 ಎಂಬ ಹೆಸರಿನಲ್ಲಿ ವಿಜ್ಞಾನ ಮೇಳ ನಡೆದಿತ್ತು. ಹೊಸತನದಿಂದ ಕೂಡಿದ್ದ ಆ ಕಾರ್ಯಕ್ರಮ ಅವಿಸ್ಮರಣೀಯ ಹಾಗೂ ಹೊಸ ಅನುಭವ. ನಾನು ಜತಿನ್ ಮತ್ತು ಚಸ್ವಿತ್‌ನ ಜೊತೆ ಸೇರಿ ವಿಜ್ಞಾನ ಮಾದರಿ ತಯಾರಿಕೆಯಲ್ಲಿ ಭಾಗವಹಿಸಿದ್ದೆವು.
ವಿಜ್ಞಾನ ವಿಭಾಗದ
INSPIRO-2k20 ಕಾರ್ಯಕ್ರಮ

INSPIRO-2k20 :
ಕಾಲೇಜು ಪ್ರಾಂಗಣದಲ್ಲಿ ರಂಗವಲ್ಲಿ


ವಿಜ್ಞಾನ ಮಾದರಿ ಪ್ರದರ್ಶನ
 ಜತಿನ್.ಎಂ.ಎಂ, ಚಸ್ವಿತ್.ಎ.ಸಿ ಮತ್ತು ಅಭಿಜಿತ್.ಕೆ.ಜೆ

INSPIRO-2k20 : ಗೆಲುವಿನ ಸಂಭ್ರಮ


ಜನವರಿ ತಿಂಗಳಾದಾಗ, ಚೀನಾ ಸಹಿತ ಕೆಲವು ವಿದೇಶ ರಾಷ್ಟಗಳಲ್ಲಿ ಕರೋನ ಎಂಬ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕುರಿತು ನಮ್ಮ ಟಿವಿ-ಪತ್ರಿಕೆಗಳಲ್ಲಿ ಗಮನಾರ್ಹ ಸುದ್ದಿ ಆಯಿತು. ತಿಂಗಳೊಳಗೆ ಕೇರಳದಲ್ಲಿ ಮೊದಲುಗೊಂಡು ವಿವಿಧ ರಾಜ್ಯಗಳಲ್ಲಿ ಬೆರಳೆಣಿಕೆಯಷ್ಟು ಕರೋನ ವೈರಸ್ ದಾಳಿ ವರದಿಯಾಗುತ್ತಿತ್ತು. ಇದಕ್ಕೆ ದೊಡ್ಡ ಗಮನ ಕೊಡದೆ ನಾವು ನಮ್ಮ ಮೊದಲ ವರ್ಷದ ಎರಡನೇ ಸೆಮೆಸ್ಟರ್ ಪರೀಕ್ಷೆಗೆ ಸಮೀಪಿಸುತ್ತಿದ್ದೆವು. ಅನಿರೀಕ್ಷಿತವಾಗಿ ಕರೋನ ರೋಗಿಗಳ ಸಂಖ್ಯೆ ತೀವ್ರವಾಗಿ ಏರಿತು. ಮಾರ್ಚ್‌ನಲ್ಲಿ ಜನತಾ ಕರ್ಫ್ಯೂನಿಂದ ಆರಂಭಗೊಂಡು ಇಡೀ ಜಗತ್ತಿನಾದ್ಯಂತ ಲೋಕ್‌ಡೌನ್, ಟ್ರಿಪಲ್ ಲೋಕ್‌ಡೌನ್, ಸೀಲ್ ಡೌನ್ ಎಂಬ ವಿವಿಧ ಹೆಸರುಗಳಲ್ಲಿ ದಿಗ್ಭಂದನವೇ ಆಯ್ತು. ಎಲ್ಲರಿಗೂ ಗೊತ್ತಿರುವ ವಿಚಾರ. ದಿನಗಳು ಉರುಳಿದಂತೆ ಪರೀಕ್ಷೆ ನಡೆಸಲು ಅಸಾಧ್ಯ ಎಂಬ ಸನ್ನಿವೇಶ ಸೃಷ್ಟಿ ಆದಾಗ ವಿವಿಧ ಶಿಕ್ಷಣ ಇಲಾಖೆ/ಮಂಡಳಿಗಳು ಪರೀಕ್ಷೆ ಮಾಡದೆ ಮಾರ್ಕ್ ನೀಡುವ ಯೋಜನೆಗಳನ್ನು ರೂಪಿಸಿತು. ನಮ್ಮ ಪದವಿ ಶಿಕ್ಷಣವನ್ನು ನಿಯಂತ್ರಿಸುವ ರಾಷ್ಟ್ರೀಯ ಸಂಸ್ಥೆಯಾದ ಯು.ಜಿ.ಸಿಯು ಕೂಡ ಪರೀಕ್ಷೆ ಇಲ್ಲದೆ ಎರಡನೇ ಸೆಮೆಸ್ಟರ್‌ಗೆ ಅಂಕ ವಿತರಣೆ ಮಾಡಲು ಸೂತ್ರವನ್ನು ಸಿದ್ಧಪಡಿಸಿತು (ಎಲ್ಲರನ್ನೂ ಪಾಸ್ ಮಾಡಿಬಿಟ್ಟಿತು ಎಂಬ ಪ್ರಯೋಗವನ್ನು ಖಂಡಿಸುತ್ತೇನೆ 🤫). ಹಾಗೆ ಎರಡನೇ ಸೆಮೆಸ್ಟರ್ ಕೂಡ ಅಧಿಕೃತವಾಗಿ ಇತ್ಯರ್ಥವಾಯ್ತು. ಸೆಪ್ಟೆಂಬರ್ ಆರಂಭದಿಂದ ಮೂರನೇ ಸೆಮೆಸ್ಟರ್‌ಗೆ ಡಿಜಿಟಲ್ ತರಗತಿ ಶುರು ಆಯ್ತು. ಹೇಗೆಲ್ಲಾ ಪಠ್ಯಕ್ರಮದ ಸಿಂಹಪಾಲು ಮುಗಿಯಿತು. 

೨೦೨೧ ರ ಜನವರಿಯಲ್ಲಿ ಭೌತಿಕ ತರಗತಿ ಆರಂಭಿಸಲು ಕರೋನ ಮೌನ ಅನುಮತಿ ನೀಡಿತು. ಪ್ರಾಯೋಗಿಕ ತರಗತಿ ಹಾಗೂ ಸೈದ್ದಾಂತಿಕ ತರಗತಿಗಳು ಕೂಡ ಒಂದೆರಡು ತಿಂಗಳಲ್ಲಿ ಮುಗಿಯಿತು; ಮುಗಿಸಿದೆವು. ಜನವರಿ ಅಂತ್ಯದಲ್ಲಿ ನಮ್ಮ ಕಾಲೇಜಿನಲ್ಲಿ ಎನ್.ಸಿ.ಸಿಯ ವಾರ್ಷಿಕ ತರಬೇತಿ ಶಿಬಿರ ಹಮ್ಮಿಕೊಂಡಿದ್ದರು. ಫೆಬ್ರವರಿ ತಿಂಗಳಲ್ಲಿ ನಾನು ನಮ್ಮ ಕಾಲೇಜಿನ ಎನ್.ಸಿ.ಸಿ ಬಳಗದೊಂದಿಗೆ ಮಡಿಕೇರಿಯಲ್ಲಿ ನಡೆದ ಎನ್.ಸಿ.ಸಿ 'ಬಿ' ಸರ್ಟಿಫಿಕೇಟ್ ಪರೀಕ್ಷೆಗೆ ಹೋದೆನು. ಎರಡು ದಿನದ ಕಾಲ ನಡೆದ ಥಿಯರಿ ಹಾಗೂ ಪ್ರಾಕ್ಟಿಕಲ್ ಪರೀಕ್ಷೆ ಮುಗಿಸಿ ವಾಪಾಸು ಬಂದೆವು. ಮೂರನೇ ಸೆಮೆಸ್ಟರ್‌ಗೆ ಮೊದಲ ವೇಳಾಪಟ್ಟಿ ಪ್ರಕಟ ಆಯ್ತು. ಪರೀಕ್ಷೆ ಸಿದ್ಧತೆ ಪೂರ್ತಿ ಆದಂತೆ, ಕರೋನ ವೈರಸ್ ಮತ್ತೆ ಶಕ್ತಿಶಾಲಿಯಾಗಿ ಸಿಡಿದೆದ್ದಿತು. ಕಾಲೇಜು ಪುನಃ ಬಂದ್ ಆಯಿತು. ಮೂರನೇ ಸೆಮೆಸ್ಟರ್‌ನ ಪುಸ್ತಕ ಅರ್ಧದಲ್ಲಿ ಮಡಚಿಟ್ಟು ನಾಲ್ಕನೇ ಸೆಮೆಸ್ಟರ್‌ಗೆ ಹಾರಿದೆವು; ಕರೋನ ಹಾರಿಸಿತು. ಏಪ್ರಿಲ್‌ನ‌ಲ್ಲಿ‌ ಮೂರು ಪರೀಕ್ಷೆಗಳು ಹೇಗೋ ನಡೆಯಿತು. ಅದೇ ವೇಳೆ ನಾನು ಮತ್ತು ನನ್ನಂತ ಅಂತರ್ ರಾಜ್ಯ ವಿದ್ಯಾರ್ಥಿಗಳ ಮೇಲೆ ಬಿದ್ದ ಒತ್ತಡಕ್ಕೆ, ಒಳಗಾದ ಭೇದ-ಭಾವಕ್ಕೆ ಮಿತಿಯಿಲ್ಲ, ವರ್ಣಿಸಲು ಮಾತಿಲ್ಲ, ಮಾಡಿದ ಕರೋನ ಪರೀಕ್ಷೆಗಳ ಲೆಕ್ಕ ಮೆಲುಕು ಹಾಕಲು ಮನಸ್ಸೇ ಇಲ್ಲ. 
ಸುದ್ದಿ ಚಾನೆಲ್‌ನ ಚರ್ಚೆಯಲ್ಲಿ


ಈ ನಡುವೆ ಜುಲೈ 25 ರಂದು ಸುಳ್ಯದ ಸುದ್ದಿ ಚಾನೆಲ್, ಸ್ವಾತಂತ್ರ್ಯದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಚರ್ಚಾಸ್ಪರ್ಧೆಗೆ ಗೆಳೆಯ ಅಭಿಷೇಕ್‌ನ ಜೊತೆಗೆ ಕಾಲೇಜನ್ನು ಪ್ರತಿನಿಧಿಸಿ ಭಾಗವಹಿಸಿದೆನು. ಆಗಸ್ಟ್ 15 ರಂದು ಆ ಚರ್ಚಾ ಸ್ಪರ್ಧೆ ಸುದ್ದಿಯ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾಯಿತು. ಈ‌ ಬಾರಿಯ ಸ್ವಾತಂತ್ರ್ಯ ದಿನಾಚರಣೆಯು ಎನ್.ಸಿ.ಸಿಯೊಂದಿಗೆ ಕಾಲೇಜಿನಲ್ಲಿ ನಡೆಯಿತು. ಕರೋನ ಬಿಕ್ಕಟ್ಟಿನ ಮಧ್ಯೆ ಪದವಿ ಶಿಕ್ಷಣ ಸವಾಲು ಆಗಿತ್ತು ಎಂಬುದು ನಿಜ. ಆದರೆ ಎನ್.ಸಿ.ಸಿಯು ಸವಾಲನ್ನು ಮೆಟ್ಟಿ ಹಿಂದೆಂದಿಗಿಂತಲೂ ಸಕ್ರೀಯವಾಗಿ ಆನ್‌ಲೈನ್ ಮೂಲಕ ವರ್ಷವಿಡೀ ನಡೆಯುತ್ತಿತ್ತು. ಆದರೆ ಹಿಂದಿನ ವರ್ಷಗಳಲ್ಲಿ ವಾರಕ್ಕೊಮ್ಮೆ ನಡೆಯುತ್ತಿದ್ದ ಪರೇಡ್‌ಗಳನ್ನು ಮೀರಲು ಆನ್‌ಲೈನ್ ತರಗತಿಗೆ ಖಂಡಿತ ಸಾಧ್ಯವಿಲ್ಲ.

ಕರೋನದ ಎರಡನೇ ಅಲೆಯ ಪ್ರಭಾವ ಎಷ್ಟಿತ್ತೆಂದರೆ, ಮಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಕಳೆದ ನಲವತ್ತು ವರ್ಷದಲ್ಲಿ ಪ್ರಕಟಿಸಿದ ಪರೀಕ್ಷಾ ವೇಳಾಪಟ್ಟಿ ತಯಾರಿಕೆಯ ಸಿಂಹಪಾಲು ಶ್ರಮವು ನಮ್ಮ ಮೂರನೇ ಸೆಮೆಸ್ಟರ್‌ಗೆ ಬೇಕಾಗಿ ವ್ಯಯ ಆಗಿದೆ ಎಂಬುದರಲ್ಲಿ ಅತಿಶಯೋಕ್ತಿ ಅಗತ್ಯ ಇಲ್ಲ. ಪರೀಕ್ಷೆಯ ವೇಳಾಪಟ್ಟಿಯನ್ನು ಗುರುತು ಮಾಡಿ ಮಾಡಿ, ವರ್ಷ ಮುಗಿಯುವ ಮೊದಲೇ ನನ್ನ ಮನೆಯ ಕ್ಯಾಲೆಂಡರ್ ಸವೆದು ಹೋಗಿದೆ ಎಂದಾದರೆ... ಅದಕ್ಕಿಂತ ಹೆಚ್ಚಿನ ಮಾತು ಅಗತ್ಯವೇ? ನಮ್ಮ ಕಷ್ಟವೇ ಇಷ್ಟಾದರೆ, ದ.ಕ, ಕೊಡಗು, ಉಡುಪಿ ಜಿಲ್ಲೆಗಳ ಹಿತಾಸಕ್ತಿಯನ್ನು ಕಾಪಾಡಿಕೊಂಡು, ಕೇಂದ್ರ-ರಾಜ್ಯ ಸರಕಾರದ ಆದೇಶಗಳಿಗೆ ಎದುರಾಗದಂತೆ ಕರೋನ ವ್ಯಾಪನೆಗೂ ಕಾರಣವಾಗದಂತೆ, ಯು.ಜಿ.ಸಿ ಮಾರ್ಗನಿರ್ದೇಶಗಳಿಗೆ ಅನ್ವಯವಾಗಿ ಪರೀಕ್ಷಾ ವೇಳಾಪಟ್ಟಿಯನ್ನು ತಯಾರಿಸುವುದು ಹಾಗೂ ಯಶಸ್ವಿಯಾಗಿ ಪರೀಕ್ಷೆ ನಡೆಸಲು ವಿಶ್ವವಿದ್ಯಾಲಯ ಸ್ವೀಕರಿಸಿದ ಸವಾಲು ಹಾಗೂ ಕ್ರಮ ಮೆಚ್ಚತಕ್ಕದ್ದು. ಈ ಮಧ್ಯೆ ವಿಶ್ವವಿದ್ಯಾಲಯಕ್ಕೆ ಉಂಟಾದ ತೊಡಕುಗಳು ಸಮಸ್ಯೆಗಳು ಅದೆಷ್ಟೋ ಇರಬಹುದು. ಆದರೂ ವಿಶ್ವವಿದ್ಯಾಲಯ ತನ್ನ ಧರ್ಮವನ್ನು ಪಾಲಿಸಿದೆ. ಬಹುಪಾಲು ವಿದ್ಯಾರ್ಥಿಗಳು ಕೂಡ ಪರೀಕ್ಷೆ ಮಾಡದೆ ಫಲಿತಾಂಶ ಪ್ರಕಟಿಸುವ ನೀತಿಗೆ ಭೌತಿಕವಾಗಿ ಒಪ್ಪಿದರೂ ಮಾನಸಿಕವಾಗಿ ಒಪ್ಪಲಾರರು ಎಂದು ನನ್ನ ಅನಿಸಿಕೆ. ದ.ಕ ದ ಎರಡು ಪ್ರಮುಖ ವಿದ್ಯಾರ್ಥಿ ಸಂಘಟನೆಗಳು ಪರೀಕ್ಷೆ ನಡೆಸಬೇಕು ಎಂಬುದಾಗಿ ನಿಲುವನ್ನು ತಳೆದಿತ್ತು. ಇದು ಕೂಡ ವಿಶ್ವವಿದ್ಯಾಲಯಕ್ಕೆ ಪರೀಕ್ಷೆ ಯಶಸ್ವಿಯಾಗಿ ನಡೆಸುವ ಬಲ ಬಂದಿರಬಹುದು. ಏನೇ ಇರಲಿ ಮೂರನೇ ಸೆಮೆಸ್ಟರ್ ಪರೀಕ್ಷೆಯೂ ಯಶಸ್ವಿಯಾಗಿ ಬರೆದಾಯಿತು. ಇನ್ನು ಫಲಿತಾಂಶ. ಅದು ಹೇಗೂ ಬರಿವಾಗ ಬರುತ್ತದೆ. ಇನ್ನು ಫಲಿತಾಂಶದ ಚಿಂತೆಗೆ ಅವಕಾಶವಿಲ್ಲ.

ಇನ್ನೀಗ ಗೊಂದಲಗಳ ನಡುವೆ ನಾಲ್ಕನೇ ಸೆಮೆಸ್ಟರ್‌ನ ಮುಂದುವರಿಕೆ; ಕಾಲ ಕೂಡಿ ಬಂದಾಗ ಪರೀಕ್ಷೆ ಆಗುತ್ತದೆ. ಅಥವಾ ಫಲಿತಾಂಶ ಬರುತ್ತದೆ.

ಕಾಲಾಯ ತಸ್ಮೈ ನಮಃ

4 ಕಾಮೆಂಟ್‌ಗಳು: