ಹಗಲು      ರಾತ್ರಿ

ಭಾನುವಾರ, ಜೂನ್ 15, 2025

ಎಲ್ಲವೂ ಚೆನ್ನಾಗಿಯೇ ಇದೆ...!

ಬರೆಯಲು ಬಿಡುವಿಲ್ಲದಷ್ಟು ಅನಿವಾರ್ಯ ಬರಹದ ಕೆಲಸಗಳಿವೆ ಎನ್ನುವುದು ವಾಸ್ತವ. ಬ್ಲಾಗಲ್ಲಿ ಬರೆಯಲು ಎನಿಸಿಕೊಂಡಿರುವ ಬರಹಗಳ ಪಟ್ಟಿ ಮನದ ಯಾವುದೋ ಕೋಣೆಯಲ್ಲಿ ಕೀಲಿ ಕಳೆದು ಹೋದ ಪೆಟ್ಟಿಗೆಯಂತೆ ಸು-ರಕ್ಷಿತವಾಗಿದೆ. ಆದರೆ ಇದೀಗ ಕೆಲವು ವಿಚಾರಗಳು ಮನಕ್ಕೆ ನಾಟಿದೆ. ಪ್ರತ್ಯಕ್ಷವಾಗಿ ನನಗೆ ನೇರವಾಗಿ ಸಂಬಂಧಿಸದ ಕೆಲವು ಘಟನೆಗಳು ಆದರೂ ಅದು ಆತ್ಮಸಾಕ್ಷಿಯನ್ನು ಕಲುಕುತ್ತಿದೆ. ಹಾಗಾಗಿ ಮನದ ಯೋಚನೆ ಅನಿವಾರ್ಯವಾಗಿ ಈ ಬರಹಕ್ಕೆ ರೂಪಕೊಡುತ್ತಿದೆ...
ಕಳೆದ ಕೆಲವು ತಿಂಗಳುಗಳಿಂದ ಪಿ.ಜಿಯ ಜೀವನದಲ್ಲಿ ಹಲವು ಹೊಸ ಮುಖಗಳ ಪರಿಚಯವಾಗಿದೆ. ಬಹುಶಃ ಹಾಸ್ಟೆಲ್ ಬದುಕಿಗಿಂತ ಭಿನ್ನವಾಗಿ ಪಿ.ಜಿಯಲ್ಲಿ ಅನಿರೀಕ್ಷಿತ ಹಿನ್ನೆಲೆಯ ಜನರ ಭೇಟಿ ಆಗ್ತಾರೆ. ಕೆಲವರು ಉದ್ಯೋಗ ನಿಮಿತ್ತ ಈ ನಗರವನ್ನು ಅರಸಿ ಬಂದವರು, ಇನ್ನೂ ಕೆಲವರು ನನ್ನಂತೆ ಶಿಕ್ಷಣ ನಿಮಿತ್ತ ಬಂದವರು, ಇತ್ಯಾದಿ. ನಾನು ಇರುವ ಪಿ.ಜಿಯ ಸಮೀಪ ವಿಶೇಷ ಚೇತನ ಮಕ್ಕಳಿಗೆ ಉಚಿತ ಉದ್ಯೋಗ ತರಬೇತಿ ನೀಡುವ ಸಂಸ್ಥೆಯೊಂದು ಕಾರ್ಯನಿರ್ವಹಿಸುತ್ತದೆ. ಅಲ್ಲಿ ಹೆಚ್ಚು ಕಡಿಮೆ 20 ದಿನ ದೈರ್ಘ್ಯವಿರುವ ಕೋರ್ಸ್‌ಗಳನ್ನು ಹಮ್ಮಿಕೊಳ್ಳುತ್ತಾರೆ. ಈ ಕೋರ್ಸ್‌ಗಳಿಗೆ ದ.ಕ, ಉಡುಪಿ ಭಾಗಗಳಿಂದ ಬರುವ ದೂರದ ವಿದ್ಯಾರ್ಥಿಗಳಿಗೆ ನಾನಿರುವ ಪಿ.ಜಿಯಲ್ಲಿ ಆಹಾರ-ವಸತಿ ವ್ಯವಸ್ಥೆ. ಹಾಗಾಗಿ ಪ್ರತಿತಿಂಗಳು ಒಂದಷ್ಟು ಹೊಸ ಮುಖಗಳ ಪರಿಚಯ ಆಗ್ತದೆ. ಅವರ ಹೆಸರು ನೆನಪುಳಿಯುವಷ್ಟರಲ್ಲಿ ಅವರು ಕೋರ್ಸ್ ಮುಗಿಸಿ ಹೊರಟಿರುತ್ತಾರೆ.
ನಾನು ಪಿ.ಜಿ ಸೇರಿದ ಮೇಲೆ ಇದೀಗ 4 ನೇ ಬ್ಯಾಚ್‌ನ ಉದ್ಯೋಗಾರ್ಥಿ ವಿಶೇಷ ಚೇತನರ ತರಬೇತಿ ನಡೆಯುತ್ತಿದೆ. ಅವರ ತರಬೇತಿ ಕುರಿತು ನನಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ, ತರಬೇತಿಗೆ ಬಂದಿರುವಷ್ಟು ಮಂದಿಯೂ ಛಲವಾದಿಗಳೇ. ಏನೋ ಒಂದು ಗುರಿಯನ್ನು ಸಾಧಿಸಬೇಕು. ಕನಿಷ್ಠ ತನ್ನ ಮನೆಯವರಿಗೆ ಹೊರೆಯಾಗದಂತೆ ಸ್ವಂತ ಕೆಲಸವೊಂದನ್ನು ಪಡೆಯಬೇಕು ಎನ್ನುವ ಮಾತು, ಆಶಯ ಅವರಿಂದ ಬರುತ್ತಿತ್ತು. ಇಲ್ಲಿ ಬರುವ ವಿಶೇಷ ಚೇತನ ಸಹೋದರರಲ್ಲಿ ಮಾತು ಬಾರದವರು, ಕಿವಿ ಕೇಳಿಸದವರು, ಚಲನೆಯ ಸಮಸ್ಯೆ ಇರುವವರು, ಮಾನಸಿಕ ಅಸ್ಥಿರತೆ ಉಳ್ಳವರು ಹೀಗೆ ಹಲವು ವಿಧದವರು ಇರುವರು. ಪ್ರತಿಯೊಬ್ಬರೂ ಒಂದೊಂದು ಸಾಂಸ್ಕೃತಿಕ, ಭಾಷಿಕ ಹಿನ್ನೆಯವರು. ಆದರೆ ಉದ್ಯೋಗ ಪಡೆಯುವ ಬಯಕೆಯಿಂದ ಇದುವರೆಗೂ ಮನೆಮಂದಿಯನ್ನು ಅಗಲಿ ನಿಲ್ಲದ ಇವರು ಇಲ್ಲಿಗೆ ಬಂದಿದ್ದಾರೆ. ಪ್ರಮುಖವಾಗಿ ತರಬೇತಿ ಪಡೆದ ಇವರಿಗೆ ನಗರದ ಪ್ಯಾಕೇಜಿಂಗ್ ಯೂನಿಟ್‌ಗಳಲ್ಲಿ ಕೆಲಸ ಸಿಕ್ಕಿರುವ ಬಗ್ಗೆ ಮಾಹಿತಿ ಕೇಳಿದ್ದೇನೆ. ಆದರೂ ಬಹುತೇಕರಿಗೂ ಆ ಅವಕಾಶವೂ ಸಿಗುವುದಿಲ್ಲ. ಅವರ ತರಬೇತಿಯ ಶೈಲಿ ನಾನು ಪ್ರತ್ಯಕ್ಷ ಕಂಡು ಅರಿಯದಿದ್ದರೂ ತರಬೇತಿಗೆ ಸೇರಿದ ಇವರು ಕಂಪ್ಯೂಟರ್ ಶಿಕ್ಷಣ / ಉದ್ಯೋಗದೆಡೆಗೆ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ನೋಡುವಾಗ ನನಗೂ ಖುಷಿ ಆಗ್ತಾ ಇದೆ. ಪದವಿ ಮುಗಿಸಿದ ಸಾಮಾನ್ಯ ವಿದ್ಯಾರ್ಥಿಗಳು ಕನ್ನಡ ಟೈಪಿಂಗ್ ಗೊತ್ತಿಲ್ಲ ಎನ್ನುವ ಈ ದಿನಗಳಲ್ಲಿ, ನನಗೆ ಕನ್ನಡ ನುಡಿ ಟೈಪಿಂಗ್ ಮಾಡಲು ಬರ್ತದೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಕೆಲವು ಉದ್ಯೋಗಾರ್ಥಿಗಳ ಮಾತು ಕೇಳಿದಾಗ ಜೇನು ಸವಿದಷ್ಟು ಖುಷಿಯಾಗ್ತದೆ. ಇಲ್ಲಿ ಬರುವ ವಿಶೇಷ ಚೇತನ ಉದ್ಯೋಗಾರ್ಥಿಗಳಲ್ಲಿ ಬಹುತೇಕರು ಹತ್ತನೆ ತರಗತಿ ಪಾಸ್ ಮಾಡಿಕೊಂಡಿದ್ದಾರೆ. ನಂತರ ಕೆಲವರು ಪಿಯುಸಿಗೆ ಸೇರ್ಪಡೆಗೊಂಡರೂ ಕಲಾ ವಿಭಾಗದಲ್ಲಿ ಪ್ರಥಮ ಪಿಯು ಪಾಸ್ ಮಾಡಿಕೊಳ್ಳಲಾಗದೆ ಹಿಂದುಳಿದಿರುವುದು ಗಮನಾರ್ಹ ವಿಷಯ. ನಾನು ಕಂಡುಕೊಂಡಂತೆ ವಿಶೇಷ ಚೇತನ ಮಕ್ಕಳು ಸಾಮಾನ್ಯವಾಗಿ ಕಲಾವಿಭಾಗವನ್ನೇ ಆಯ್ಕೆ‌ ಮಾಡಿಕೊಳ್ಳುತ್ತಾರೆ ಅಥವಾ ಸಮಾಜ ಅವರಿಗೆ ಆ ಆಯ್ಕೆಯನ್ನು ಮಾತ್ರ ಸೀಮಿತಗೊಳಿಸಿದಂತಿದೆ. ದೇವರು ಈ ಜಗದ ಯಾರಿಗೂ ಮೋಸ ಮಾಡಿಲ್ಲ. ಈ ಜಗದ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಭಿನ್ನರಾದವರು ಹಾಗೂ ವಿಶೇಷತೆಯುಳ್ಳವರು. ಇದನ್ನು ಅರ್ಥ ಮಾಡಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ, ಅಥವಾ ಅರ್ಥ ಮಾಡಿಯೂ ಅರ್ಥವಾಗದಂತೆ ನಟಿಸುತ್ತಿದ್ದೇವೆ. ಪ್ರಸ್ತುತ ಕಂಡುಬರುವ ಒಂದು ಬೆಳವಣಿಗೆಯೆಂದರೆ ಎಸ್.ಎಸ್.ಎಲ್.ಸಿ ತನಕ ವಿಶೇಷ ಮಕ್ಕಳ ಶಾಲೆಗಳು, ಅವರಿಗಾಗಿಯೇ ತಯಾರಿಸಿದ ಪಠ್ಯಗಳು, ಚಟುವಟಿಕೆಗಳು, ಇದು ಹಲವಾರು ಮಂದಿಯ ಬೆಳವಣಿಗೆಯ ವ್ಯಾಪ್ತಿಯನ್ನು ಮೊಟಕುಗೊಳಿಸಿದಂತೆ, ಆಳೆತ್ತರ ಬೆಳೆದು ಆಗಸದೆಡೆಗೆ ಗುರಿಯಿಡಬೇಕಾದ ಮರವನ್ನು ಹೂಕುಂಡದೊಳು ಬೆಳೆಸಿ ಬೋನ್‌ಸಾಯಿ ಮಾಡಿ ವೀಕ್ಷಕ ವಸ್ತುವಾಗಿಸಿದಂತೆ ಅಲ್ಲವೇ..., SSLC ಪಾಸ್ ಮಾಡಿಸಿ ಅವರನ್ನು ಸಮಾಜ ಕೈಬಿಡುತ್ತಿದೆ. ಯಾಕೆ ಹೀಗೆ. ಇದು ಸರಿಯೋ. ಗೊತ್ತಿಲ್ಲ. ನಿಜವಾಗಿಯೂ ಪ್ರತಿಯೊಬ್ಬ ವಿದ್ಯಾರ್ಥಿಯೂ (ಆತನು ಯಾವುದೇ ಆರೋಗ್ಯ ಸಮಸ್ಯೆ ಹೊಂದಿದ್ದರೂ) ಸಾಮಾನ್ಯ ಶಾಲೆಯಲ್ಲೇ ಕಲಿಯುವಂತಾಗಬೇಕು. ಆಗ ತಾನೂ ಈ ಸಮಾಜದ ಅವಿಭಾಜ್ಯ ಅಂಶ ಎಂದು ಆತನಿಗೂ ತಿಳಿಯುತ್ತದೆ. ಅನಿವಾರ್ಯ ಎನಿಸಿದರೆ ಎನಿಸಿದರೆ ವಾರಕ್ಕೆ ಒಂದು ದಿನ ಪಂಚಾಯತ್ ಹಂತದಲ್ಲಿ ಪ್ರೌಢಶಾಲಾ ಹಂತದವರೆಗಿನ ಎಲ್ಲಾ ವಿಶೇಷ ಮಕ್ಕಳಿಗೆ ಭಾಷೆ ಮತ್ತು ಸಂವಹನ ಕುರಿತು ವಿಶೇಷ ತರಬೇತಿ ಹಮ್ಮಿಕೊಳ್ಳುವುದು ಉಚಿತ. ಇದರ ಬದಲಾಗಿ ವಾರಕ್ಕೆ 6 ದಿನವೂ ವಿಶೇಷ ತರಬೇತಿ ನೀಡುತ್ತಾ ವಿಶೇಷ ಚೇತರನ್ನು ಸಮಾಜದಿಂದ ವಿಭಜಿಸುವುದು ಸರಿಯೇ? 
10 ನೇ ತರಗತಿಯ ತನಕ ಸಾಮಾನ್ಯ ಶಾಲೆಯಲ್ಲಿ ಕಲಿತ ಒಬ್ಬ ವಿಶೇಷ ಚೇತನ ವಿದ್ಯಾರ್ಥಿಗೆ ನಂತರದ ದಿನಗಳಲ್ಲಿ ಆತನ ಆಸಕ್ತಿಯ ಮೇರೆಗೆ ಪಿಯುಸಿ ಅಥವಾ ವೃತ್ತಿ ಶಿಕ್ಷಣಕ್ಕೆ‌ ಆಯ್ಕೆ ಇರಬೇಕು. ಹೀಗಾದಾಗ ವಿಶೇಷ ಚೇತನರು ಸಮಾಜದ ಆಗುಹೋಗಿವಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು; ಸ್ಪರ್ಧಾಜಗದೊಳು ಸ್ವತಂತ್ರ ಬದುಕನ್ನು ಮುನ್ನಡೆಸಬಹುದು. 
ಪ್ರತಿ ಸಲ 20 ದಿನದ ತರಬೇತಿಯ ಉದ್ಯೋಗಾರ್ಥಿಗಳು ಆರಂಭದ ಒಂದು ವಾರ ಅವರು ನನ್ನನ್ನೂ, ನಾನು ಅವರನ್ನು ಅಪರಿಚಿತರಂತೆ ಮತ್ತು ಅನುಮಾನದಿಂದ ನೋಡುವುದು ವಾಡಿಕೆ. ದಿನಕಳೆದಂತೆ ಅವರೇ ಬಂದು ನನ್ನನ್ನು ಮಾತನಾಡಿಸುವುದು, ನಾನು ಅವರ ಕುರಿತು ವಿಚಾರಿಸುವುದು, ಅವರು ಅವರ ಕತೆಗಳನ್ನು ಹೇಳುವುದು, ಕೆಲವರು ಅವರು ಅನುಭವಿಸುವ ಸಮಸ್ಯೆಗಳ ಕುರಿತು ವಿವರಿಸಿದರೆ, ಕೆಲವರು ಅವರ ಗುರಿ / ಕನಸಿನ ಕುರಿತು ಮಾತಾಡುವರು. ಇನ್ನು ಕೆಲವರು ನನ್ನ ಮುಂದೆ ಇರುವ ಅವಕಾಶಗಳ‌ ಕುರಿತು ಈಚೆಗೆ ಸಲಹೆ / ಸೂಚನೆಗಳ ಕುರಿತಾದ ನಿರರ್ಗಳ ಉಪದೇಶ ನೀಡುವರು. ಭೇಟಿಯಾದ ಹಾಗೂ ಮಾತನಾಡಿಸಿದ ಬಹುಪಾಲು ವಿಶೇಷ ಚೇತನರೂ ಕೂಡ ವಿಶೇಷ ಬೌದ್ಧಿಕ ದೃಷ್ಟಿಕೋನಯುಳ್ಳವರು. 

ವರ್ಷಗಳ ಹಿಂದೆ ಅಂಗಲವಿಕಲರು ಎನ್ನುವ ಪದದ ಬದಲಿಗೆ ವಿಶೇಷ ಚೇತನರು ಎಂಬ ಪದ ಬಳಕೆಯ ಕುರಿತು ಚರ್ಚೆಗಳು ನಡೆಯುತ್ತಿರುವ ಸನ್ನಿವೇಷ ನೆನಪಿಗೆ ಬಂತು. ಅಂದು ಈ ಹೆಸರುಗಳು ವಿಶೇಷಚೇತನರ ಆತ್ಮಸ್ಥೈರ್ಯ ಹೆಚ್ಚಿಸುವ ಒಂದು ಪ್ರಯತ್ನ ಮಾತ್ರ ಇರಬಹುದು ಅಂತ ನಾನು ಎನಿಸಿದ್ದೆ. ಆದರೆ ಇದೀಗ ಅದರ ಉದ್ದೇಶ ಅಷ್ಟು ಮಾತ್ರವಲ್ಲ, ವಿಶೇಷ ಚೇತನ ಎಂಬ ಪದ ನಿಜವಾಗಿಯೂ ಅರ್ಥವತ್ತಾದ ಪದ ಎಂಬ ಅರಿವಾಗಿದೆ. ಸಾಮಾನ್ಯವಾಗಿ ವಿಶೇಷಚೇತನರು ಹಠಮಾರಿಗಳು,‌ ಮೂಗಿನ ತುದಿಯಲ್ಲಿ ಸಿಟ್ಟು ಇರುವವರು ಅಂತ ಸಮಾಜದ ಅಲಿಖಿತ ಅನಿಸಿಕೆ ಇದೆಯಾದರೂ, ಅದು ಬರಿ ಅಷ್ಟಕ್ಕೆ ಮಾತ್ರ ಸೀಮಿತವಾಗಬಾರದು. ವಿಶೇಷ ಚೇತನರು ಕೆಲಸ ಮಾಡುವುದರಲ್ಲಿ ಏಕಾಗ್ರತೆ ಉಳ್ಳವರು, ಶ್ರಮಿಕರು, ನಿಸ್ವಾರ್ಥರು, ತನ್ನದೇ ಆದ ದೃಷ್ಟಿಕೋನ ಉಳ್ಳವರು ಎಂಬೀ ಅಂಶಗಳನ್ನು ಸಮಾಜ ಅಂಗೀಕರಿಸಬೇಕು. ಸಿಟ್ಟು, ಹಠಮಾರಿತನ ಮಾನವ ಸಹಜ ಗುಣಗಳು, ಇವು ಸಮಾಜದ ಕ್ರೀಯೆಗಳಿಂದ ಪ್ರಚೋದಿಸಲ್ಪಡುತ್ತದೆ, ಹಾಗಾಗಿ ಇದು ಯಾರ ತಪ್ಪಲ್ಲ. ಆದರೆ ಮಾನವೀಯ ಮೌಲ್ಯಗಳು ಎನಿಸಿಕೊಂಡವುಗಳನ್ನು‌ ಕಡೆಗಣಿಸುವ ಮನುಜ ಜನ್ಮ ಹೇಗೆ ಸಹಜವೆನಿಸತ್ತದೆ?

ಮೂರ್ಖರ ದೇಶದಲ್ಲಿ ಬುದ್ದಿವಂತನೇ ಮೂರ್ಖನಾದಂತೆ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ