ಜೀವನವು ಸದಾ ಹರಿವ ನೀರಂತೆ ಎಂದು ಹೋಲಿಕೆ ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ಜೀವನ ಕಟ್ಟಿನಿಂತ ನೀರಿನಂತೆಯೂ ಭಾಸವಾಗುತ್ತದೆ. ಹಾಗೆಂದು ಅದು ಅಚಲ ಅಥವಾ ಸ್ಥಿರ ಎನ್ನುವ ಹಾಗಿಲ್ಲ. ಸಾಗರವು ಆಕಾಶನೋಟಕ್ಕೆ ಪ್ರಶಾಂತವಾಗಿರುತ್ತದೆ, ಅಚಲ ಎನಿಸುತ್ತದೆ. ಆದರೆ ಸಮುದ್ರ ತೀರದಿ ನಿಂತು ನೋಡಿದಾಗ ನೈಜತೆಯ ಅರಿವಾಗುತ್ತದೆ. ಸಾಗರದ ಆಳದಲ್ಲಿ ಮತ್ತಷ್ಟೂ ಅಸ್ಥಿರತೆಯನ್ನು ಗಮನಿಸಬಹುದು. ಹಾಗಾಗಿ ನನ್ನ ಅನಿಸಿಕೆಯಂತೆ ಮಾನವನ ಜೀವನವು ಒಂದು ನದಿಯಲ್ಲಿನ ನೀರಿನ ಪಯಣ ಎನ್ನುವುದಕ್ಕಿಂತ ಸಾಗರದೊಳಗಿನ ನೀರಿನಂತೆ ಎನ್ನಬಹುದು. ನೂರಾರು ಮಿಲಿಯನ್ ಚದರ ಕಿಲೋಮೀಟರ್ ವಿಸ್ತಾರವಾದ ಹಾಗೂ ಸಹಸ್ರಾರು ಮೀಟರ್ ಆಳದ ಸಾಗರದ ಜಟಿಲತೆಯು ಅರಿತಂತೆ ಮತ್ತಷ್ಟು ಜಟಿಲವಾಗುತ್ತದೆ. ಪ್ರತಿಯೊಂದು ಮೀಟರ್ ಆಳಕ್ಕೆ ಸಾಗಿದಂತೆ ನೀರಿನ ತಾಪಮಾನ, ಆಮ್ಲೀಯ ಗುಣ, ಉಪ್ಪಿನ ಅಂಶ, ಆಮ್ಲಜನಕ ಸ್ವೀಕೃತಿಯ ಸಾಮರ್ಥ್ಯ ಇತ್ಯಾದಿ ನೂರಾರು ಗುಣಗಳ ಅನಿರೀಕ್ಷಿತ ಏರಿಳಿತಗಳು ನಡೆಯುತ್ತದೆ. ಕೆಲವನ್ನು ಪ್ರವಚಿಸಬಹುದಾದರೂ, ಕೆಲವು ಘಟಕಗಳ ಏರಿಳಿತದ ರಹಸ್ಯ ಸಂಬಂಧಗಳು ಇನ್ನೂ ವಿಜ್ಞಾನಲೋಕಕೆ ಮರೀಚಿಕೆಯಾಗಿಯೇ ಉಳಿದಿದೆ. ಅದೇ ರೀತಿ ಸಾಗರ ಪ್ರವಾಹದ ವೇಳೆ ನೀರಿನ ಸ್ವಭಾವವು ಉಷ್ಣವಲಯ ಹಾಗೂ ಶೀತವಲಯದ ಸಾನಿಧ್ಯದ ಮೇಲೆಯೂ ಅವಲಂಬಿಸಿರುತ್ತದೆ. ಸಾಗರದ ಮತ್ತೊಂದು ವಿಶೇಷವೆಂದರೆ ಸಾಗರದೊಳು ಸೇರಿದ ನೀರು ಸಾಗರ ಪ್ರವಾಹದ ಮೂಲಕ ಸಾಗರದ ಪ್ರತಿ ಮೂಲೆ ಮೂಲೆಗೆ ಪಯಣಿಸುತ್ತದೆ.
ಪ್ರಸ್ತುತ ಇಲ್ಲಿ ನನಗೆ ಸಾಗರದ ಹೋಲಿಕೆಯು ವ್ಯಕ್ತಿಗಳ ವ್ಯಕ್ತಿತ್ವದ ಅಧ್ಯಯನಕ್ಕೆ ಬಹುದೊಡ್ಡ ಸಲಕರಣೆ ಎನಿಸಿದೆ. ಹಾಗಾಗಿ ಈ ಬರಹ. ಪ್ರತಿಯೊಬ್ಬ ವ್ಯಕ್ತಿಯೂ ಆತನ ಸ್ವಂತಿಕೆಯಿಂದ ಭಿನ್ನವಾಗಿರುತ್ತಾನೆ. ಹಾಗಾಗಿ ವ್ಯಕ್ತಿತ್ವದ ಅನುಕರಣೆಯು ಸದಾ ನಿಷಿದ್ಧ. ಡಾರ್ವಿನ್ ಪ್ರತಿಪಾದಿಸಿದ ಪ್ರಕೃತಿಯ ಆಯ್ಕೆಯ ಸಿದ್ಧಾಂತದ ಪ್ರಕಾರ ಈ ಜಗತ್ತಿನಲ್ಲಿ ಯಾರು ಉಳಿಯಬೇಕು, ಯಾರು ಯಾವಾಗ ಅಳಿಯಬೇಕು ಎನ್ನುವುದೆಲ್ಲಾ ಪ್ರಕೃತಿ ಲಿಖಿತ. ಹಾಗಾಗಿ ಮನುಜಾ... ಬದುಕು ಜಟಕಾ ಬಂಡಿ... ವಿಧಿಯದರ ಸಾಹೇಬ... ಎನ್ನುವ ಕವಿ ಮಾತು ನಿಜವಲ್ಲವೇ?
ಕೆಲವು ನಿರ್ದಿಷ್ಟ ಜನರ ಗುಂಪಿನಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಉಳಿದವರ ಸಾಮಾನ್ಯ ವ್ಯಕ್ತಿತ್ವಕ್ಕಿಂತ ತೀರಾ ಭಿನ್ನವಾಗಿರಬಹುದು (ಕೆಲವೊಮ್ಮೆ ಅದು ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ). ಅದನ್ನು ಅರಿತಿರುವ ಆ ವ್ಯಕ್ತಿಯು ತನ್ನ ಗುಂಪಿನ ಹಿತಕ್ಕಾಗಿ ಹೊಂದಿಕೊಳ್ಳುವುದು ಅನಿವಾರ್ಯವಾಗಬಹುದು. ತಾನು ಸರಿಯೆಂದು, ತನ್ನ ಗುರಿ, ಮಾರ್ಗ ಹಾಗೂ ತತ್ವ ಸರಿಯೆಂದು ನಿಖರವಾಗಿ ಬಲ್ಲವನಾಗಿದ್ದರೂ ಅಥವಾ ಬಂಡುಧೈರ್ಯದಿಂದ ನಂಬಿದವನೇ ಆದರೂ ಅಂತಿಮ ತೀರ್ಪು ಪ್ರಕೃತಿಯದ್ದೇ. ಆದರ್ಶ ದೇಹ ಸಾಯಬಹುದು; ಆದರ್ಶ ವ್ಯಕ್ತಿತ್ವ ಉಳಿಯುತ್ತದೆ. ಆದರೆ ಆ ವ್ಯಕ್ತಿಯ ಎಲ್ಲಾ ನಂಬಿಕೆಯೂ ಸರಿಯಾಗಿದ್ದರೂ, ಆತನಿರುವ ಸ್ಥಳ ದೋಷಯುಕ್ತವಾದರೆ ಫಲವುಂಟೇ?
ಹಾಗಾಗಿ ವ್ಯಕ್ತಿ ವಿಶಿಷ್ಠವಾದ ವ್ಯಕ್ತಿತ್ವವು ಕೆಲವೊಮ್ಮೆ ಸಾಂದರ್ಭಿಕವಾಗಿ ಧರ್ಮಸಂಕಟಕ್ಕೊಳಗಾಗಬೇಕಾಗಬಹುದು. ಸಹಜ. ಆದರೆ ವ್ಯವಸ್ಥೆ ಸುಧಾರಣೆ ಆದಂತೆ ಅಥವಾ ಕಾಲಾಂತರದಲ್ಲಿ ಆ ವ್ಯಕ್ತಿಯ ವ್ಯಕ್ತಿತ್ವ ಮೌಲ್ಯಯುತವೆನಿಸಬಹುದು. ಹಾಗಾಗಿ ಪ್ರತಿಯೊಬ್ಬರೂ ವ್ಯಕ್ತಿತ್ವವು ತನ್ನ ಹೆಬ್ಬೆಟ್ಟಿನಂತೆ ಅಥವಾ ಬಹುಶಃ ಅದಕ್ಕಿಂತ ಮಿಗಿಲಾದ ವಿಶೇಷ ಗುರುತು ಎಂಬುದು ನೆನಪಿಸಿಕೊಳ್ಳುವುದು ಅನಿವಾರ್ಯ. ಮಿಲಿಯನ್‌ಗಟ್ಟಲೆ ವರ್ಷಗಳಿಂದ ಭಾರತದ ಕರಾವಳಿಯ ಕೆಲವು ಸಮುದ್ರ ತೀರದಲ್ಲಿ ನಿಕ್ಷೇಪವಾಗುತ್ತಿದ್ದ, ಯಾರಿಗೂ ಬೇಡವಾಗಿದ್ದ ಹೊಯಿಗೆ (ಮರಳು) ಇಂದು ಟೈಟಾನಿಯಂ, ವೆನೇಡಿಯಂ, ಯುರೇನಿಯಂ, ಥೋರಿಯಂ ಎಂಬೆಲ್ಲಾ ಅಮೂಲ್ಯ ರಾಸಾಯನಿಕ ಮೂಲವಸ್ತುಗಳ ಆಗರ ಎಂದು ತಿಳಿಯುತ್ತಿದ್ದಂತೆ ಮೌಲ್ಯವನ್ನು ಪಡೆದುಕೊಂಡಿದೆ, ಇಡೀ ರಾಷ್ಟ್ರದ ಹೆಮ್ಮೆಯ ಪ್ರತೀಕವಾಗುತ್ತಿದೆ. ಹಾಗಾಗಿ ಭವಿಷ್ಯಕ್ಕಾಗಿ ನಮ್ಮ ವ್ಯಕ್ತಿತ್ವವನ್ನು ಠೇವಣಿ (Deposit) ಇಡುವುದು ಅನಿವಾರ್ಯ, ಬದಲಾಗಿ ಅಡ (Collateral) ಇರಿಸಬಾರದು. ವ್ಯಕ್ತಿತ್ವ ವಿಕಾಸವಾಗಲಿ; ಪರಿವರ್ತನೆಯಾಗಬಾರದು.


🎉👌👌
ಪ್ರತ್ಯುತ್ತರಅಳಿಸಿ