ಹಗಲು      ರಾತ್ರಿ

ಗುರುವಾರ, ಏಪ್ರಿಲ್ 10, 2025

ಒಂದನೇ ತರಗತಿ ಪ್ರವೇಶದ ಗೊಂದಲ : ಬೇಕಿದೆ ಧನಾತ್ಮಕ ಚಿಂತನೆ..‌!

ಏಪ್ರಿಲ್ ತಿಂಗಳ ಭರ್ಜರಿ ಸೆಕೆ. ಅದರ ಮಧ್ಯೆ ತಂಪೆರೆಯುವ ಮಳೆ. ಹವಾಮಾನ ಹೇಗೆ ಇದ್ದರೂ ಎಲ್ಲರೂ ತಮ್ಮ ತಮ್ಮ ಜೀವನ ಪಯಣದಲ್ಲಿ ಮುಂದಕ್ಕೆ ಸಾಗುವ ಚಿತ್ತದಲ್ಲಿ ತಲ್ಲೀನರಾಗಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ - ೨೦೨೦ ಈಗಾಗಲೇ ಹಲವಾರು ಸಾಮಾಜಿಕ ಚರ್ಚೆಗಳನ್ನು ನೋಡಿವೆ. ಇದೀಗ ಪ್ರೈಮರಿ ಮಕ್ಕಳ ಪೋಷಕರು ಸಂಕಷ್ಟದಲ್ಲಿದ್ದಾರೆ ಎಂದು ವಿವಿಧ ದೃಶ್ಯ ಮತ್ತು ಪತ್ರಿಕಾ ಮಾಧ್ಯಮಗಳು ವರದಿ ಮಾಡುತ್ತಿವೆ.‌ ಸಾಮಾಜಿಕ ತಾಣಗಳಲ್ಲೂ ಈ ಬಗ್ಗೆ ಚರ್ಚೆಗಳಿಗೆ ಕೊರತೆಯಿಲ್ಲ. ಮಾಧ್ಯಮಗಳ ಮುಂದೆ ಪೋಷಕರ ಪ್ರತಿನಿಧಿಗಳೆಂಬಂತೆ ಬರುವವರು ಭಾವನೆಗಳ ಮೂಲಕ ಚರ್ಚಾವಿಷಯವನ್ನೇ ಅದಲು ಬದಲಾಗಿಸುತ್ತಿವೆ ಎನಿಸುತ್ತದೆ. ನನ್ನ ಅನಿಸಿಕೆಯಂತೆ ಪೋಷಕರಲ್ಲಿ ಅನಗತ್ಯ ಕಳವಳವನ್ನು ಸೃಷ್ಟಿಸುವಲ್ಲಿ ಮಾಧ್ಯಮಗಳೇ ತಪ್ಪಿತಸ್ಥರು. ವಾರ್ತೆಗಾಗಿ ವಿಷಯವನ್ನು ಸೃಷ್ಟಿಸುವ ಅಥವಾ ಪ್ರಮುಖವಲ್ಲದ ಸುದ್ದಿಗೆ ಪ್ರಾಮುಖ್ಯತೆ ಕಲ್ಪಿಸಿ ಬೆಂಕಿಗೆ ತುಪ್ಪವೆರೆಯುವ ಕಾರ್ಯ ನಡೆಯುತ್ತಿದೆ. ಮಾಧ್ಯಮ‌ದ ಉದ್ದೇಶ ಸುದ್ದಿ ಪ್ರಸಾರವಾಗಬೇಕೇ ಹೊರತು ಸುದ್ದಿ ಸೃಷ್ಟಿಸುವುದು ಆಗಬಾರದು ತಾನೆ? ಸಂಶೋಧನಾತ್ಮಕ ಪತ್ರಿಕೋದ್ಯಮವಾದರೂ ಸರಿಯೇ... ವಿಷಯ ವಸ್ತುವಿನ ಹಿನ್ನೆಲೆ ಮತ್ತು ನೈಜತೆಯ ಮೇಲೆ‌ ಆದ್ಯತೆ ನೀಡಬೇಕೆ ಹೊರತು ಜನರ ಭಾವನೆಗಳ ಮೂಲಕ ಸೃಷ್ಟಿಯಾದ ಅಥವಾ ಆಗಬಹುದಾದ ಸುದ್ದಿಗಳಿಗಲ್ಲ. 

ಚರ್ಚೆಯ ವಿಷಯ :
ರಾಷ್ಟ್ರೀಯ ಶಿಕ್ಷಣ ನೀತಿ - ೨೦೨೦ ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಒಂದನೇ ತರಗತಿಗೆ ದಾಖಲಾಗುವ ಮಗುವಿಗೆ ಪ್ರವೇಶಾತಿ ವರ್ಷದ ಜೂನ್ ತಿಂಗಳ ಒಂದನೆಯ ತರಗತಿಗೆ ಕನಿಷ್ಠ ಆರು ವರ್ಷ ವಯಸ್ಸು ಆಗಿರಬೇಕೆಂಬುದು ಕಡ್ಡಾಯಗೊಳಿಸಲಾಗಿದೆ. ಈ ತೀರ್ಮಾನ ರಾಜಕೀಯ ಲಾಭದ ತೀರ್ಮಾನ ಅಲ್ಲ ಎಂಬುದು ಸ್ಷಷ್ಟ.‌ ಯಾಕೆಂದರೆ ರಾಜಕೀಯಕ್ಕೆ ಅತೀತವಾಗಿ ಆರು ವಯಸ್ಸಿನ ಒಳಗಿನ ಮಕ್ಕಳ ಪೋಷಕರು ವೀರೋಧಿಸಲು ಸಾಧ್ಯತೆ ಇರುವಂತಹ ತೀರ್ಮಾನ. ಕಳೆದ ಕೆಲವು ದಶಕಗಳಿಂದ‌ ಇದ್ದ ಅಂಗನವಾಡಿಗಳ ಕಲ್ಪನೆಯನ್ನು ಕಳೆದ ಎರಡು ದಶಕಗಳಿಂದ ನರ್ಸರಿ ಸ್ಕೂಲ್‌ಗಳು ಮೀರಿಸಿವೆ. ಒಂದನೆಯ ತರಗತಿಗೆ ಸೇರುವ ಮಕ್ಕಳಿಗೆ ಆರೋಗ್ಯ ರಕ್ಷಣೆ ಮತ್ತು ಪೋಷಕಾಂಶಯುಕ್ತ ಆಹಾರ ನೀಡಿ ಶಿಕ್ಷಣಕ್ಕೆ ಸಜ್ಜುಗೊಳಿಸುತ್ತಿದ್ದ ಸರಕಾರದ ಅಂಗನವಾಡಿಗಳು ಇಂದು ಕಲಿಕೆಗೂ ಮುಂದೆ ಕಲಿಸುವ ಪಾಠಶಾಲೆಗಳಾಗಿವೆ. ಅಂಗನವಾಡಿಯಲ್ಲಿರುವ ಆಹಾರ, ಆರೋಗ್ಯ, ಪೋಷಕಾಂಶಗಳ ಕಲ್ಪನೆಯನ್ನು ಪ್ಲೇ-ಸ್ಕೂಲ್ ಅಥವಾ ನರ್ಸರಿ ಶಾಲೆಗಳಲ್ಲಿ ಕಾಣುವುದು ತೀರಾ ಕಷ್ಟ. ವ್ಯಾವಹಾರಿಕ ಜಂಜಾಟದಲ್ಲಿ ತೊಡಗಿಸಿಕೊಂಡಿರುವ ಆಧುನಿಕ ಸಮಾಜಕ್ಕೆ ಪ್ರೀ-ಪ್ರೈಮರಿ (ಪೂರ್ವ ಪ್ರಾಥಮಿಕ) ಸಂಸ್ಥೆಗಳಿಗೆ ಮಕ್ಕಳನ್ನು ಕಳಿಸುವುದು ಅನಿವಾರ್ಯವಾಗಿದೆ. ಹಾಗಾಗಿ ಮಗು ಸುಮಾರು ಮೂರು ವರ್ಷ (ತಕ್ಕ ಮಟ್ಟಿಗೆ ಮಾತು ಕಲಿತಾಗ) ಆದಾಗ ಪ್ರೀ-ಪ್ರೈಮರಿ ಶಾಲೆಗೆ ಸೇರಿಸುವುದು ಇಂದಿಗೆ ಅಲಿಖಿತ ವಾಡಿಕೆಯಾಗಿದೆ. 5 ವರ್ಷ ಆದೊಡನೆ ಒಂದನೆಯ ತರಗತಿಗೆ ಸೇರಿಸುವುದು ಕೂಡ ಮುಂದುವರಿಯುತ್ತಿತ್ತು. ಮೇಲ್ನೋಟಕ್ಕೆ 5 ವರ್ಷದ ಮತ್ತು 6 ವರ್ಷದ ಮಕ್ಕಳ‌ ನಡುವೆ ಭೌತಿಕ ಬದಲಾವಣೆ ಹುಡುಕುವುದು ಕಷ್ಟ. ಆದರೆ ಮಾನಸಿಕವಾಗಿ ಮಕ್ಕಳು ಔಪಚಾರಿಕ ಶಿಕ್ಷಣಕ್ಕೆ ಪ್ರವೇಶಿಸಲು ಕನಿಷ್ಠ ಆರು ವರ್ಷ ವಯಸ್ಸಿರಬೇಕೆಂದು ವಿವಿಧ ಸಮೀಕ್ಷೆಗಳು ಮತ್ತು ಸಂಶೋಧನೆಗಳ ಮೂಲಕ ಕಂಡುಹಿಡಿಯಲಾಗಿದೆ. ಹಾಗಾಗಿ 6 ವಯಸ್ಸು ಎಂಬುದು ಪ್ರಾಮುಖ್ಯವಾಗುತ್ತದೆ. ಸಾಮಾನ್ಯವಾಗಿ ಭಾರತದಲ್ಲಿ ಶೈಕ್ಷಣಿಕ ವರ್ಷವನ್ನು ಜೂನ್ 1 ಕ್ಕೆ ಕೇಂದ್ರೀಕರಿಸಿ ಆರಂಭಿಸುವುದು ವಾಡಿಕೆ. ಹಾಗಾಗಿ ಜೂನ್ 1 ಕ್ಕೆ ಕನಿಷ್ಠ ಆರು ವಯಸ್ಸು ತುಂಬಿದ ಮಗುವಿಗೆ ಮಾತ್ರ ಒಂದನೇಯ ತರಗತಿ ಪ್ರವೇಶ ಎಂಬ ಮಾತು / ನಿರ್ದೇಶನ ಮಹತ್ವ ಪಡೆಯುತ್ತದೆ. ಪೋಷಕರ ಅಥವಾ ಪೋಷಕರ ಪರ ವಾದ ಮಾಡುವವರ ಪ್ರಮುಖ ಪ್ರಶ್ನೆಯೇನೆಂದರೆ,

1) ಒಂದು ಮಗು ಮೇ 31 ಕ್ಕೆ ಜನಿಸಿದರೆ ಆ ಮಗು ಒಂದು ಶೈಕ್ಷಣಿಕ ವರ್ಷ ಕಳೆದುಕೊಳ್ಳುವುದಿಲ್ಲವೇ ಎಂದು?
ಉತ್ತರ : ಹೌದು ನಿಜ.

2) ಕೆಲವು ದಿನಗಳ ಅಥವಾ ಕೆಲವು ವಾರದ ಅಥವಾ ಕೆಲವು ತಿಂಗಳ ಅಂತರದಲ್ಲಿ ಜನಿಸಿದ ಮಕ್ಕಳು ಈಗಾಗಲೇ ಜೊತೆಯಲ್ಲಿ ಪ್ರೀ-ಪ್ರೈಮರಿ ತರಗತಿಗೆ ಹೋಗುತ್ತಿದ್ದು, ಜೂನ್‌ 1 ದಿನಾಂಕದ ತತ್ವದ ಪ್ರಕಾರ ಒಂದು ಮಗು ಒಂದನೆಯ ತರಗತಿಗೂ ಇನ್ನೊಂದು ಮಗು ಮನೆಯಲ್ಲೇ ಇರಬೇಕಾದ ಅಥವಾ ಪ್ರೀ-ಪ್ರೈಮರಿಯಲ್ಲಿ ಮತ್ತೊಂದು ವರ್ಷ ಕಳೆಯಬೇಕಾದ ಅನಿರ್ವಾಯತೆ ಸಂಭವಿಸಬಹುದು. ಹಾಗಾದಲ್ಲಿ ಶಾಲೆಗೆ ಸೇರಲು ಅವಕಾಶ ಸಿಗದ ಮಗುವಿನ ಮನಸ್ಸಿಗೆ ಆಘಾತ ಆಗದಿಲ್ಲವೇ ಎಂದು.
ಉತ್ತರ : ಹೌದು; ನಿಜ.

ಇನ್ನು ಮೊದಲನೆಯ ಪ್ರಶ್ನೆಯ ಉತ್ತರವನ್ನು ವಿಶ್ಲೇಷಣೆ ಮಾಡೋಣ. ಮನುಷ್ಯ ಶತಾಯುಷಿ ಎಂಬ ಮಾತು ವಾಡಿಕೆಯಲ್ಲಿದ್ದರೂ ಇತ್ತೀಚೆಗೆ ಜೀವನದಲ್ಲಿ ಶತಕ ಬಾರಿಸುವವರು ಕೋಟಿಗೊಬ್ಬ ಎನ್ನುವ ಸ್ಥಿತಿ ಬಂದಿದೆ. ವಿಜ್ಞಾನ ಎಷ್ಟು ಮುಂದುವರಿದರೂ ಮನುಷ್ಯನ ಆಯುಷ್ಯವನ್ನು ಅಳೆಯುವ ಜ್ಞಾನ ಯಾರಿಗೂ ಇಲ್ಲ ಎಂಬುದು ವಾಸ್ತವ. ಆರೋಗ್ಯವಂತ ಯಾವಾಗ ಬೇಕಾದರೂ ಮರಣಿಸಬಹುದು; ಅನಾರೋಗ್ಯದಿಂದ ಬಳಲುವ ವ್ಯಕ್ತಿ ದೀರ್ಘಾಯುಷ್ಯ ಪಡೆಯಲೂಬಹುದು. ಹಾಗಾಗಿ ನಮ್ಮ ಆಯುಷ್ಯ ಎಷ್ಟು ಎಂದು ನಿಶ್ಚಯವಿಲ್ಲದಿರುವಾಗ ಶೈಕ್ಷಣಿಕ ವರ್ಷ ನಷ್ಟವಾಗುತ್ತದೆ ಎನ್ನುವ ವಾದ ಕೇವಲ ಭಾವನೆಯ ಅತಿರೇಕ ಮಾತ್ರ. ಹೀಗೆಂದ ಮಾತ್ರಕ್ಕೆ ಮತ್ತೂ ಎರಡು ವರ್ಷ ಕಳೆದು ಶಾಲೆಗೆ ಸೇರಿಸಿ ಅಂತ ಮರು ಪ್ರಶ್ನೆ ಉದ್ಭವಿಸಬಹುದು. ಏನೇ ಮರು ಪ್ರಶ್ನೆ ಕೇಳಿದರೂ... ಅದರ ಹಿನ್ನೆಲೆಯಲ್ಲಿ ಯಾಕಾಗಿ 6 ವರ್ಷ ಪ್ರಮುಖ ಎಂಬುದನ್ನು ಸ್ವಂತಿಕೆಯಿಂದ ಅರ್ಥ ಮಾಡಿವ ಪ್ರಯತ್ನ ಮಾಡಬೇಕಿದೆ.‌ ಅದರ ಹೊರತಾಗಿ ಇದನ್ನು ರಾಜಕೀಯಕ್ಕೆ, ಧರ್ಮಕ್ಕೆ ಅಥವಾ ಬೇರೆ ಯಾವುದಕ್ಕೋ‌ ಗಂಟುಹಾಕಿ ಅದರ ಸುತ್ತ ಹುಡುಕಾಡಿದರೆ ಫಲವಿಲ್ಲ. ವಿರೋಧಿಸುತ್ತಾ ಇರಬೇಕಷ್ಟೇ... ಹಾಗೆಯೇ ಇನ್ನೊಂದು ವಿಚಾರ... ಜನರ ಪ್ರತಿಭಟನೆಗೆ ಮಣಿದು ಶಿಕ್ಷಣ ಇಲಾಖೆ ಜೂನ್ 1 ಕ್ಕೆ ಒಂದು ತಿಂಗಳವರೆಗೆ (ಮೇ 1) ಪೂರ್ವದಲ್ಲಿ ಜನಿಸಿದ ಮಕ್ಕಳಿವೆ ಪ್ರವೇಶ ವಯಸ್ಸಿನಲ್ಲಿ ಸಡಿಲಿಕೆ ಮಾಡಿತು ಎನಿಸೋಣ. ಹಾಗಾದರೆ ಮೇ.‌ 1 ರಿಂದ 31 ರ ವರೆಗೆನ ಮಕ್ಕಳಿಗೆ ನ್ಯಾಯ ಸಿಕ್ಕಿತು. ಹಾಗಾದ್ರೆ ಏಪ್ರಿಲ್ 30 ಕ್ಕೆ ಜನಿಸಿದ ಮಗುವಿಗೆ ವಂಚನೆ ಅಲ್ಲವೇ? ಶಿಕ್ಷಣ ಇಲಾಖೆಯು ಜೂ. 1 ಕ್ಕೆ 6 ತಿಂಗಳ ಸಡಿಲಿಕೆ ನೀಡಿತು ಎನಿಸೋಣ. ಹಾಗಾದ್ರೆ ಡಿಸೆಂಬರ್ 1 ರಿಂದ ಮೇ‌ 31 ರವರೆಗೆ ಜನಿಸಿದವರಿಗೆ ಲಾಭ. ಈಗ ನವೆಂಬರ್‌ನಲ್ಲಿ ಜನಿಸಿದ ಮಗು ಏನು ಪಾಪ ಮಾಡಿತು‌? ಮತ್ತೂ ಸ್ವಲ್ಪ ಸಡಿಲಿಕೆ ನೀಡಿ... 5 ವರ್ಷ ಭರ್ತಿಯಾದ ಎಲ್ಲರಿಗೂ ಒಂದನೆಯ ತರಗತಿ ಪ್ರವೇಶ ಅಂತ ಘೋಷಣೆ ಮಾಡಿದರೆ ಎಲ್ಲರಿಗೂ ನ್ಯಾಯ ಸಿಗಬಹುದೇ...? 5 ವರ್ಷ ಭರ್ತಿಯಾಗಲು 1 ದಿನ ಬಾಕಿ ಉಳಿದಿರುವ ಮಗುವಿಗೆ ಅನ್ಯಾಯವಾಗುವುದಿಲ್ಲವೇ? ಹೀಗೆ ನಡೆಯುವ ಒಳ್ಳೆಯ ಘಟನೆಯನ್ನು ಅನ್ಯಾಯ ಅಂತ ಅಂದುಕೊಂಡರೆ ನ್ಯಾಯದ ರುಚಿ ಅರಿಯಲು ಸಾಧ್ಯವಿಲ್ಲ. ಐದು ವಯಸ್ಸಿನ ಮಗುವಿಗಿಂತಲೂ ಆರು ವಯಸ್ಸಿನ ಮಗುವಿನ ಗ್ರಹಿಕಾ ಶಕ್ತಿ ಶೈಕ್ಷಣಿಕ ಜೀವನ ಆರಂಭಕ್ಕೆ ಸೂಕ್ತ. ಕಳೆದ ಕೆಲವು ವರ್ಷಗಳಿಂದ ಪೋಷಕರ ಅಜ್ಞಾನದಿಂದ/ಅವಸರದಿಂದ ಹಲವಾರು ಮಕ್ಕಳ ಸ್ಥಿತಿ ದುಂಬಿಯಿಂದ ಕಲ್ಲು ಎತ್ತಿಸಿದ ಹಾಗೆ ಆಗಿದೆ. ಈ ವರ್ಷ ಒಂದನೆಯ ತರಗತಿಗೆ ಪ್ರವೇಶವಾಗಬೇಕಾದ ಮಕ್ಕಳ ಪೋಷಕರು ನಿಜವಾಗಿ ಅದೃಷ್ಟವಂತರೆನಿಸಬೇಕು. ಹೊಸದೊಂದು ಶೈಕ್ಷಣಿಕ ಕ್ರಾಂತಿಗೆ ಕಾರಣೀಭೂತರಾಗುವ ಮತ್ತು ಮಕ್ಕಳ ಮನೋವಿಜ್ಞಾನ ಆಧಾರಿತ ಶೈಕ್ಷಣಿಕ ಜೀವನಕ್ಕೆ ಶುಭಹಾರೈಸುವ ಅವಕಾಶ ಲಭಿಸಿದೆ. ಈ ಅವಕಾಶವನ್ನು ಅಜ್ಞಾನ/ಅಹಂಕಾರಗಳಿಂದ ಕೈತಪ್ಪಿಸುವುದು ಸೂಕ್ತವಲ್ಲ. ನಾವು ತಪ್ಪುದಾರಿಯಲ್ಲಿ ನಡೆಯುತ್ತಿದ್ದೇವೆ ಎಂಬುದು ಗೊತ್ತಾದ ತಕ್ಷಣವೇ ದಾರಿ ಬದಲಾವಣೆ ಮಾಡಬೇಕು; ನಾನು ನಡೆದ ದಾರಿಯೇ ಹೆದ್ದಾರಿ ಅಂತ ಅಂದುಕೊಳ್ಳಬಾರದು. 

ಇನ್ನು ಎರಡನೇ ಪ್ರಶ್ನೆಯದು ಪ್ರಮುಖ ಪ್ರಶ್ನೆ. ಈ ವಿಜ್ಞಾನ / ಮನೋವಿಜ್ಞಾನದ ಅಧ್ಯಯನ, ಅದರ ಅನುಷ್ಠಾನ 5-6 ವಯಸ್ಸಿನ ಮಕ್ಕಳಿಗೆ ಎಲ್ಲಿಂದ ಅರ್ಥವಾಗಬಹುದು. ಈ ವಿಚಾರದಲ್ಲಿ ಪ್ರಯತ್ನಪಟ್ಟರೆ ಪೋಷಕರ ಮನಸ್ಸನ್ನು 10-15 ನಿಮಿಷದಲ್ಲಿ ಬದಲಾಯಿಸಬಹುದೇನೋ... ಆದರೆ ಮಕ್ಕಳಿಗೆ ಅರ್ಥ ಮಾಡಿಸುವುದು ಸುಲಭವೇ? ಖಂಡಿತವಾಗಿ ಇದು ಸುಲಭದ ವಿಚಾರ ಅಲ್ಲದೆ ಇರಬಹುದು. ಹಾಗೆಂದ ಮಾತ್ರಕ್ಕೆ ಹೆತ್ತು ಹೊತ್ತು ಸಲಹಿದ‌ ತಂದೆ-ತಾಯಿಗೆ ಇದು ಅಸಾಧ್ಯವಲ್ಲ. ಜೀವನದ ಮುಂದಿನ ದಿನಗಳಲ್ಲಿ ಅನಿರೀಕ್ಷಿತವಾಗಿ ಬರಬಹುದಾದ ಅದೆಷ್ಟೋ ಸಂಕೀರ್ಣತೆಗಳಲ್ಲಿ ಮಗು ಅಚಲವಾಗಿ ಮುನ್ನುಗ್ಗುವಂತೆ ಮಾಡಲು ಇದೊಂದು ತರಬೇತಿ ಎಂದು ಅನಿಸಬಾರದೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ? ಪೋಷಕರು ವ್ಯಾವಹಾರಿಕ ಜೀವನದಲ್ಲಿ ಸಾಮಾನ್ಯ ಮನಷ್ಯರಾಗಿರಬಹುದು. ಆದರೆ ಪ್ರತಿ ಮಗುವಿಗೆ ಸಿಗಬಹುದಾದ ಶ್ರೇಷ್ಠ ಗುರು ಅಮ್ಮ. ಆ ಮಗುವಿಗೆ ಒಲಿಯಬೇಕಾದ ಪ್ರತ್ಯಕ್ಷ ದೇವರು ಅಪ್ಪ ಎಂಬುದನ್ನು ಪೋಷಕರು ಸ್ವಯಂ ಅರಿತುಕೊಳ್ಳಬೇಕು. ಸ್ವಧರ್ಮವನ್ನು ಅನುಸರಿಬೇಕು. ಬದಲಾವಣೆಗಳು ನ್ಯಾಯಯುತ ಅನಿವಾರ್ಯವಾಗಿದ್ದರೆ, ಅದರಲ್ಲಿ ಅನ್ಯಾಯ ಹುಡುಕಬಾರದು... 
ಸತ್ಯದ ರುಚಿ ಕಹಿಯಾಗಿರಬಹುದು; ಸತ್ಯ ಸಿಹಿಯಾಗಿರಲೇಬೆಕೆನ್ನುವಂತಿಲ್ಲ.
ಹಾಗೆಂದ ಮಾತ್ರಕ್ಕೆ ಕಹಿಯಾದ ವಿಷಯವೆಲ್ಲಾ ಸತ್ಯವೆಂದು ಅಪಾರ್ಥ ಮಾಡದೆ ಮುನ್ನಡೆಯೋಣ...

ಜ್ಞಾನ ಮತ್ತು ವಿವೇಕದಿಂದ ಜೀವನವನ್ನು ಅರ್ಥ ಮಾಡುವ ಪ್ರಯತ್ನ ಮಾಡೋಣ.‌

ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ
ಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರು
ಮದುವೆಗೋ‌ ಮಸಣಕೋ ಹೋಗೆಂದಕಡೆಗೋಡು
ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ||

ಕಗ್ಗದ ಮಾತು ನಿಜವಾಗಿರಬಾರದೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ