ಹಗಲು      ರಾತ್ರಿ

ಶುಕ್ರವಾರ, ಅಕ್ಟೋಬರ್ 1, 2021

ನೀ ನನ್ನ ಕೈಬಿಟ್ಟಾಗ.‌‌.. ನಾ ದೂರವಾದೆ...

ನಾನು ಸ್ವತಂತ್ರವಾಗಿ ಮೊಬೈಲ್ ಬಳಸಲು ಆರಂಭಿಸಿದ ದಿನದಿಂದ ಬಿ.ಎಸ್.ಎನ್.ಎಲ್ ನನ್ನ ಆಪ್ತನಾಗಿತ್ತು. ಆ 2G ದಿನಗಳಲ್ಲಿ ಬಿ.ಎಸ್.ಎನ್.ಎಲ್ ಎಂಬುದು ಉಳಿದ ಖಾಸಗಿ ಕಂಪನಿಗಳಿಗೆ ಒಂದು ಹೆಜ್ಜೆ ಮುಂದೆಯೇ ಇತ್ತು. ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ಸರಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್ ಕೂಡ ಆಧುನಿಕತೆಗೆ ಅಪ್‌ಡೇಟ್ ಆಗಲು ಪ್ರಾರಂಭಿಸಿತು. "ಕನೆಕ್ಟಿಂಗ್ ಇಂಡಿಯಾ" ಎಂಬ ಧ್ಯೇಯದ ಈ ಸಂಸ್ಥೆಯು ಭಾರತಾದ್ಯಂತ ದೇಶದ ಮೂಲೆ ಮೂಲೆಯಲ್ಲಿಯೂ ಸಂಪರ್ಕ ಜಾಲವನ್ನು ಕಲ್ಪಿಸಿತ್ತು. ಆಡುಮುಟ್ಟದ ಸೊಪ್ಪಿಲ್ಲ; ಬಿ.ಎಸ್.ಎನ್.ಎಲ್ ಸಂಪರ್ಕವಿಲ್ಲದ ಹಳ್ಳಿಯಿಲ್ಲ ಎಂದರೆ ಆ ದಿನಗಳಲ್ಲಿ ಅತಿಶಯೊಕ್ತಿ ಇಲ್ಲ (ಅಂದರೆ ಮೊಬೈಲ್ ಬಳಕೆ ಆಗುತ್ತಿದ್ದ ಪ್ರದೇಶದಲ್ಲಿ ಎಲ್ಲಾ ಬಿ.ಎಸ್.ಎನ್.ಎಲ್‌ಗೆ ಸಂಪರ್ಕ ಸಿಗುತ್ತಾ ಇತ್ತು ಅಂಥ..!). ಇದೀಗ ಬಿ.ಎಸ್.ಎನ್.ಎಲ್ 3G ಗೆ ತಲುಪಿದ ಆಯಾಸದಲ್ಲಿ ಗಾಢನಿದ್ರೆಗೆ ಬಿದ್ದಿದೆ. ನನ್ನ ಊರಿನಲ್ಲಿ ನನಗೆ ತಿಳಿದ ದಿನಗಳಿಂದಲೇ ಬಿ.ಎಸ್.ಎನ್.ಎಲ್ ಅತ್ಯಂತ ಗುಣಮಟ್ಟದ ಸಿಗ್ನಲ್ ಹೊಂದಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕರೆಂಟ್ ಹೋದಾಗ ಸಿಗ್ನಲ್ ಹೋಗುವ ಹವ್ಯಾಸ ಜಾಸ್ತಿ ಆಯ್ತು. ಆರಂಭದಲ್ಲಿ ಕರೆಂಟ್ ಬಂದ ಕೂಡಲೇ ಸಿಗ್ನಲ್ ಬರುತ್ತಿತ್ತು. ಆದರೆ ದಿನ ಹೋದಂತೆ, ಕರೆಂಟ್ ಬಂದರೂ ಇವಬರುದೇ ಇಲ್ಲ. ಹೆಚ್ಚುಕಡಿಮೆ ಅರ್ಧಗಂಟೆ ಕಾಯಬೇಕಾದ ಸ್ಥಿತಿ. ನನ್ನ ಕೆಲವರು ಮಿತ್ರರಿಗೂ ಇದೇ ಅನುಭವ. ಸುದ್ದಿ ಮಾಧ್ಯಮಗಳಲ್ಲೂ ತಿಳಿದ ವಿಚಾರವೂ ಇದೇ..! ಬಿ.ಎಸ್.ಎನ್.ಎಲ್‌ಗೆ ಸಂಪನ್ಮೂಲದ ಕೊರತೆಯಿಂದ ಆಗುವ ಸಮಸ್ಯೆ ತೀರಾ ಕಡಿಮೆ. ಆದರೆ ಸಂಪನ್ಮೂಲಗಳ ಕ್ರೋಡೀಕರಣ, ನಿರ್ವಹಣೆಯ ಸಮಸ್ಯೆ ದೊಡ್ಡದು. ಹೀಗಾಗಿ ನನ್ನ ಊರು ಸೇರಿದಂತೆ ದೇಶದ ಹಲವು ಕಡೆ ಟವರೂ ಇದ್ದರೂ, ಅದರ ನಿರ್ವಹಣೆ ಸರಿ ಇಲ್ಲದ ಕಾರಣ ಸಿಗ್ನಲ್‌ಗಾಗಿ ಪರದಾಡುವ ಸ್ಥಿತಿ. ಸಾಮಾನ್ಯವಾಗಿ ಕೇರಳದಲ್ಲಿ ಕಳೆದ ಕೆಲವು ವರ್ಷಗಳಿಂದ ವಿದ್ಯುತ್ ಮೊಟಕು ಆಗುವುದು ಕಡಿಮೆ, ಕರ್ನಾಟಕದ ಕೆಲವು ಪ್ರದೇಶಗಳಿಗೆ ಹೋಲಿಸಿದರೆ ಕೇರಳದಲ್ಲಿ ವಿದ್ಯುತ್ ಮೊಟಕು ಇಲ್ಲವೆಂದೇ ಹೇಳಬಹುದು. ಆದರೆ ಮಳೆಗಾಲದಲ್ಲಿ ಮರಗಳು ಬಿದ್ದು ಅಥವಾ ಇನ್ನಿತರ ಕಾರಣಗಳಿಂದಾಗಿ ವಿದ್ಯುತ್ ಸಮಸ್ಯೆ ಖಂಡಿತ ಆಗ್ತದೆ. ಹಾಗಾಗಿ ನೆಟ್ವರ್ಕ್ ಸಮಸ್ಯೆ ಎನ್ನುವುದು ದೊಡ್ಡ ತಲೆನೋವು ಆಗುವುದು ಮಳೆಗಾಲದಲ್ಲಿ. ಮಳೆಗಾಲ ಮುಗಿದೊಡನೆ ವಿದ್ಯುತ್ ಸಮಸ್ಯೆ ಬಗೆಹರಿದಾಗ, ಮತ್ತೆ ನೆಟ್ವರ್ಕ್ ಸಮಸ್ಯೆ ನೆನಪಾಗುವುದು ಮಳೆಗಾಲದಲ್ಲಿ ಹಿಂದಿನ. ವರ್ಷಗಳಲ್ಲಿ ಈ ಸಮಸ್ಯೆ ಇದ್ದರೂ ಅದು ನನ್ನ ಅನುಭವಕ್ಕೆ ಬಂದಿರಲಿಲ್ಲ. ಆದರೆ ಈ ಬಾರಿ ಇಡೀ ಕಾಲೇಜು ಮೊಬೈಲ್ ಸೇರಿದೆ. ಆನ್‌ಲೈನ್ ಮೀಟಿಂಗ್, ತುರ್ತು ಮಾಹಿತಿಗಳು, ಡಿಜಿಟಲ್ ಕ್ಲಾಸ್, ಇತ್ಯಾದಿ ಎಲ್ಲವೂ ಆನ್‌ಲೈನ್ ಇದ್ದರೆ ಮಾತ್ರ ಸಿಗುವುದು.... ಹಾಗಾಗಿ ಒಂದು ಮನಃ ಪರಿವರ್ತನೆ ಶುರು ಆಯಿತು.
ಏನಿದ್ದರೂ ಇಂದು ಇಂಟರ್ನೆಟ್ ಇಲ್ಲದೆ ಬದಕು ಸುಲಭವಲ್ಲ. ಕಂಪೆನಿಗಳು ಉಚಿತವಾಗಿ ಕೊಡುವ ರಾಶಿ ರಾಶಿ ಸಿಮ್‌ಗಳು ಖರೀದಿಸಿ ರೀ-ಚಾರ್ಜ್ ಮಾಡದೆ ಕೈಕಟ್ಟಿ ಕುಳಿತುಕೊಳ್ಳಲು ಇದು ಕಾಲವಲ್ಲ. ಸಿಮ್ ಖರೀಸಿದ ಮೇಲೆ ಅದಕ್ಕೆ ನಿಶ್ಚಿತ ದಿನಗಳು ಹಣ ಕಟ್ಟದೆ ಹೋದರೆ ಆ ಸಿಮ್‌ನ ಸಂಪರ್ಕ ಕಡಿತಗೊಳಿಸುತ್ತಾರೆ. ಹೇಗಿದ್ದರೂ ತಿಂಗಳಿಗೆ ಒಂದಿಷ್ಟು ಹಣ ಮೊಬೈಲ್ ಸೇವಾದಾರರಿಗೆ ಕಟ್ಟಲೇ ಬೇಕಾದ ಅಲಿಖಿತ ಶಾಸನ. ಬಿ.ಎಸ್.ಎನ್.ಎಲ್ ಹೇಗೂ ಸರಕಾರದ ಸ್ವಾಮ್ಯದ ಸಾರ್ವಜನಿಕ ಸಂಸ್ಥೆ. ಹಾಗಿದ್ದರೆ ನಮ್ಮ ಹಣ ಬಂಡವಾಳಶಾಹಿಗಳಿಗೆ ಕೊಡುವುದಕ್ಕಿಂತ ಸರಕಾರಕ್ಕೆ ಕೊಡುವುದು ಒಳ್ಳೆಯದಲ್ಲವೇ..? ಹೌದು. ಆದರೆ ಹಣ ಕೊಟ್ಟರೂ ಸೇವೆ ಸಿಗದಿದ್ದರೆ ಏನು ಮಾಡುವುದು...? ಸೇವೆಯನ್ನು ಕೇಳಬೇಕು; ಅಷ್ಟೇ. ನಾನು ನಮ್ಮ ಊರಿನ ಬಿ.ಎಸ್.ಎನ್.ಎಲ್ ಸಮಸ್ಯೆಯನ್ನು ಸವಿವರವಾಗಿ ಕನ್ನಡದಲ್ಲಿ ಬರೆದು ಕೇಂದ್ರ ಸರಕಾರದ ದೂರು ವಿಲೇವಾರಿ ಜಾಲತಾಣದ ಮ‌ೂಲಕ ಕಳುಹಿಸಿದೆ. ಮೂರನೇ ದಿನ ಕಾಞ್ಞಂಗಾಡ್ (ಕೇರಳ ವಲಯ) ಬಿ.ಎಸ್.ಎನ್.ಎಲ್ ಕಚೇರಿಯಿಂದ ನನಗೆ ಕರೆ ಮಾಡಿ ವಿಚಾರಿಸಿದರು. ಅವರಿಗೂ ಸ್ಪಷ್ಟವಾಗಿ ಮಲೆಯಾಳಂ‌ನಲ್ಲಿ ವಿವರಿಸಿದೆ. ಆದಷ್ಟು ವೇಗವಾಗಿ ಸಮಸ್ಯೆ ಬಗೆಹರಿಸುವ ಮಾತನ್ನು ದಯಪಾಲಿಸಿದರು. ಎರಡು ದಿನದ ಬಳಿಕ ಬಿ.ಎಸ್.ಎನ್.ಎಲ್ ಕೇರಳ ವಲಯದ ಕೇಂದ್ರ ಕಚೇರಿಯಿಂದ ಒಂದು ಇ-ಮೈಲ್ ಬಂತು. ನನ್ನ ದೂರಿನಲ್ಲಿ ಹೇಳಿದ ವಿಷಯವನ್ನು ಗಮನಿಸಲಾಗಿದೆ, ನಮ್ಮ ಊರಿನ ಆ ಟವರ್‌ಗೆ ಭೇಟಿ ಮಾಡಿದ ಮೇಲೆ ಸಮಸ್ಯೆಯನ್ನು ಬಗೆಹರಿಸಲಾಗಿದೆ ಅಂತ. ನನಗೆ ಸಂತೋಷ ಆಯಿತು. ಮೌನವಾಗಿ ಆದರೂ ನನ್ನ ಪ್ರಯತ್ನ ಕೆಲವರಿಗೆ ಆದರೂ ಪ್ರಯೋಜನ ಆಗಿರಬಹುದು ಅಂತ. ನಂತರದ ಮೂರುದಿನ ವಿದ್ಯುತ್ ಮೊಟಕು ಆಗದ ಕಾರಣ ನೆಟ್ವರ್ಕ್ ಸಮಸ್ಯೆ ಬಗೆಹರಿದಿದೆಯೋ ಎಂಬುದು ನನಗೆ ಖಾತರಿ ಆಗಲಿಲ್ಲ. 2-3 ದಿನದ ನಂತರ ವಿದ್ಯುತ್ ಹೋಗಿ 1-2 ನಿಮಿಷದಲ್ಲಿ ಬಂತು. ಆದರೆ ಆಗ ಹೋದ ಬಿ.ಎಸ್.ಎನ್.ಎಲ್ ಸಿಗ್ನಲ್ ಮತ್ತೆ ಒಂದು ಗಂಟೆ ಕಾಲ ನಾಪತ್ತೆ...!!!! ಇದು ಅವಸ್ಥೆ. ನಾಯಿ ಬಾಲ ಎಂದಿಗೂ ಡೊಂಕು... ಆ ದೂರಿನ ಮೇಲ್ಮನವಿಗೆ ಉತ್ತರ ಸಿಗಲಿಲ್ಲ. ಹೀಗೆ ಟ್ವಿಟ್ಟರ್ ನೋಡುತ್ತಿರುವಾಗ, ಬಿ.ಎಸ್.ಎನ್.ಎಲ್ ಟ್ವಿಟ್ಟರ್‌ನಲ್ಲಿ ಸಕ್ರಿಯವಾಗಿ ಗ್ರಾಹಕರ ದೂರಿಗೆ ಪ್ರತಿಕ್ರಯಿಸುತ್ತಿರುವುದು ನನ್ನ ಗಮನಕ್ಕೆ ಬಂತು. ಸಮಸ್ಯೆಯನ್ನು ಚುಟುಕಾಗಿ ಬರೆದು ಟ್ವೀಟ್ ಮಾಡಿದೆ. ಒಂದೆರಡು ದಿನದಲ್ಲಿ ಅವರು ನನ್ನ ಎರಡನೇ ಟ್ವೀಟ್‌ಗೆ ಪ್ರತಿಕ್ರಯಿಸಿದರು.
ಅಲ್ಲಿಯೂ ಇಡೇರಿಸಲಾಗದ ಭರವಸೆ ಮಾತ್ರ. ಕೆಲವು ದಿನಗಳು ಸುಮ್ಮನೆ ಕಳೆದೆನು. ಮಳೆಗಾಲದ ನೆಟ್ವರ್ಕ್ ಸಮಸ್ಯೆ ಬಗೆಹರಿಸಲು, ಇಂಟರ್ನೆಟ್ ಸಂಪರ್ಕಕ್ಕಾಗಿ ವೋಡಾಫೋನ್ (ಈಗ ವಿ) ಸಿಮ್ ಖಾಸಗಿಯಾಗಿ ಬಳಸುತ್ತಿದ್ದೆ. ಆದರೆ ಅದಕ್ಕೆ ಇತ್ತೀಚೆಗೆ ಸಿಗ್ನಲ್ ತೀರಾ ಕಮ್ಮಿ; ಮನೆಯ ಹೊರಾಂಗಣದ ಒಂದು ಮೂಲೆಯಲ್ಲಿ ಮಾತ್ರ ಉತ್ತಮವಾದ ಸಿಗ್ನಲ್ ಸಿಗುತ್ತಿತ್ತು. ಹಾಗಾಗಿ ಅದು ಕೂಡ ಅಗತ್ಯಕ್ಕೆ ಕೈತಪ್ಪುತ್ತಿತ್ತು. ಆದರೆ ವೋಡಾಫೋನ್ 2G ಉತ್ತಮವಾಗಿ ಸಿಗುತ್ತದೆ. ಹೀಗಾಗಿ ಬಿ.ಎಸ್.ಎನ್.ಎಲ್ ತ್ಯಜಿಸುವ ನಿರ್ಣಾಯಕ ನಿರ್ಧಾರಕ್ಕೆ ಕೈಹಾಕಿದೆ. ಕನಿಷ್ಠ ಪಕ್ಷ ಅಗತ್ಯಕ್ಕೂ ಕರೆ ಮಾಡಲು ಆಗದೆ ಇರುವ ದೂರವಾಣಿ ಸಂಪರ್ಕವನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಕಟ್ಟಿಟ್ಟುಕೊಂಡು ಏನು ಮಾಡಲಿ...
ಹೀಗೆ ಸೆಪ್ಟೆಂಬರ್‌‌ನಲ್ಲಿ ಆ ಬಿ.ಎಸ್.ಎನ್.ಎಲ್ ನಂಬರ್ ಇನ್ನೊಂದು ಖಾಸಗಿ ಮೊಬೈಲ್ ಸೇವಾ ಕಂಪನಿಗೆ ಪೋರ್ಟ್ ಮಾಡಲು ಹೊರಟೆ. ಆದರೆ, ಸಿಮ್ ಕಾರ್ಡ್ ಪೋರ್ಟ್ ಮಾಡಲು 1900 ಎಂಬ ಸಂಖ್ಯೆಗೆ PORT <Mobile No.> ಮಾದರಿಯ ಮೆಸೇಜ್ ಕಳುಹಿಸಬೇಕು. ಆಗ ನಮಗೆ ಒಂದು Porting Code ಸಿಗುತ್ತದೆ. ಆದರೆ ಕನಿಷ್ಠ ಪಕ್ಷ ತಿಂಗಳಿಗೆ ₹ 147 ರೀಚಾರ್ಜ್ ಮಾಡಿದವರಿಗೆ ಮಾತ್ರ Porting Code ನೀಡುವುದು ಎಂಬ ನಿರ್ಧಾರ ಇತ್ತೀಚೆಗೆ ಅನುಸರಿಸಿದೆ. ಬಹುತೇಕ ಎಲ್ಲಾ ಕಂಪೆನಿಗಳು ಇದೇ ತಂತ್ರಜ್ಞಾನ ಅಭಿವೃದ್ಧಿ‌ ಪಡಿಸಿದೆ. ಅಂದರೆ ಸಾಮಾನ್ಯ ಸಣ್ಣ ಮೊತ್ತದ ರೀ-ಚಾರ್ಜ್ ಮಾಡುವ ಸಾಮಾನ್ಯರು ಕನಿಷ್ಠ ₹147 ಪಾವತಿಸಿದ ಮೇಲೆ ಒಂದು ತಿಂಗಳ ಕಾಲ ಉಚಿತ ಕರೆ, ನೆಟ್ ಪ್ಯಾಕ್ ಪಡೆದು ಆನಂದಿಸಿ ಹೋಗಿ ಎಂದು ಅವರ ಏಕಪಕ್ಷೀಯ ನಿಲುವು. 2G ನೆಟ್ವರ್ಕ್‌ಗೆ ಪರದಾಡುವ ಗ್ರಾಹಕರಿಗೆ ಆ ರೀ-ಚಾರ್ಜ್ ನೀಡುವ ಪ್ರಯೋಜನ ಏನು... ತಿಂಗಳಿಗೆ ದೊಡ್ಡ ಮೊತ್ತದ ರೀ-ಚಾರ್ಜ್ ಮಾಡುವ ಗ್ರಾಹಕರಿಗೆ ಇದೆಲ್ಲಾ ದೊಡ್ಡ ವಿಷಯ ಎಂದು ಅನಿಸದು. ಆದರೆ ಇದೇ ಗ್ರಾಹಕಸ್ನೇಹಿ ಸೇವೆ...!!!
ಬಿ‌.ಎಸ್.ಎನ್.ಎಲ್‌ನಿಂದ ಗ್ರಾಹಕರು ವಲಸೆಹೋಗುತ್ತಿದ್ದರೆ ಅದಕ್ಕೆ ಕಾರಣ ಆ ನಮ್ಮ ಸಂಸ್ಥೆಯ ನಿರ್ದೇಶಕ ಸಮಿತಿಯ ಇಚ್ಛಾಶಕ್ತಿಯ ಕೊರತೆ. ಕಾಲ ಇನ್ನೂ ಮಿಂಚಿಲ್ಲ... ಬಿ.ಎಸ್.ಎನ್.ಎಲ್ ಮೈಕೊಡವಿ ಮತ್ತೆ ಎದ್ದು ಬಂದರೆ, ಹಳೆಯ ಗ್ರಾಹಕರು ಮರಳಿ ಬಾರದಿರುವರೇ... ನಾನು ಆ ದಿನಕ್ಕಾಗಿ ಕಾಯುತ್ತಿರುವೆ... 
ಮರಳಿ ನಿನ್ನ ಕೈ ಹಿಡಿಯಲು...
|| ಅಭಿಜಿತ್.ಕೆ.ಜೆ ||

2 ಕಾಮೆಂಟ್‌ಗಳು: