ಹಗಲು      ರಾತ್ರಿ

ಶುಕ್ರವಾರ, ಸೆಪ್ಟೆಂಬರ್ 10, 2021

ಸ್ಥಳನಾಮದ ಸುತ್ತ - ಒಂದು ಹುತ್ತ

ನಮ್ಮೂರಿನ ಸ್ಥಳನಾಮ, ಪ್ರಾದೇಶಿಕ ಭಾವನೆಗಳು, ನಮ್ಮ ಸಂಸ್ಕೃತಿ, ಜಾತಿ, ಮತ, ನಂಬಿಕೆಗಳು ಇವೆಲ್ಲಾ ಸಾಮಾನ್ಯವಾಗಿ ಜನರ ಸ್ವಾಭಿಮಾನವನ್ನು ಮುಗಿಲಿಗೇರಿಸುವ ಅಂಶಗಳು. ಒಂದು ಸಣ್ಣ ಗ್ರಾಮದಲ್ಲಿ ಹಲವು ಜಾತಿ, ಮತ, ನಂಬಿಕೆಗಳು, ಆಚರಣೆಗಳು ಇರಬಹುದು. ಆದರೂ ಆ ಗ್ರಾಮವನ್ನು ಪ್ರತಿನಿಧಿಸುವಂತೆ ಎಲ್ಲರೂ ಒಪ್ಪುವಂತಹ ಒಂದು ಚಾರಿತ್ರಿಕ ಅಥವಾ ಪೌರಾಣಿಕ ಹಿನ್ನೆಲೆ ಇರುತ್ತದೆ. ಅಪರೂಪಕ್ಕೆ ಆ ಹಿನ್ನೆಲೆಯಲ್ಲಿಯೂ ಸಣ್ಣಪುಟ್ಟ ಭಿನ್ನತೆಯೂ ಇರಬಹುದು. ಅದೇ ರೀತಿ, ಆ ಸ್ಥಳದ ಹೆಸರು ಅಲ್ಲಿನ ಚಾರಿತ್ರಿಕ ಅಥವಾ ಪೌರಾಣಿಕ ಹಿನ್ನೆಲೆಯ ಅಡಿಯಲ್ಲಿ ರೂಪುಗೊಂಡಿರುವ ಸಾಧ್ಯತೆ ಹೆಚ್ಚು. ಈ ನಿಟ್ಟಿನಲ್ಲಿ ವಿಶೇಷವಾಗಿ ನಮ್ಮ ಭಾರತದ ಸ್ಥಳನಾಮಗಳು ಸಂಶೋಧನಾ ಯೋಗ್ಯವಾದ ವಿಷಯಗಳು ಎಂಬುದಕ್ಕೆ ತರ್ಕವಿಲ್ಲ.

ಸುಸಂಸ್ಕೃತವಾಗಿದ್ದ ಭಾರತದ ಮಣ್ಣು ವಿದೇಶಿ ಆಡಳಿತದ ಭಾಗವಾದಾಗ ಅಸಂಖ್ಯಾತ ಸ್ಥಳನಾಮಗಳು ವಿದೇಶಿಯರ ನಾಲಿಗೆಗೆ ಒಗ್ಗಿಕೊಳ್ಳದೆ ಹೊಸರೂಪ ಅಥವಾ ಹೊಸ ಶೈಲಿಯನ್ನು ಪಡೆಯಿತು. ಕೆಲವು ಪ್ರಮುಖ ಉದಾಹರಣೆಗಳನ್ನು ತೆಗೆದುಕೊಂಡರೆ... ಬೆಂಗಳೂರು ಬೇಂಗ್ಳೂರ್..., ಮಂಗಳೂರು ಮೇಂಗ್ಳೂರ್..., ಕೋಯಿಕ್ಕೋಡ್ ಕ್ಯಾಲಿಕಟ್..., ತಿರುವಿದಾಂಕೂರ್ ಟ್ರಾವಂಕೂರ್..., ಹೀಗೆ ಲೆಕ್ಕವಿಲ್ಲದಷ್ಟು ಉದಾಹರಣೆಗಳು. ಮುಂದೆ 1947 ರ ನಂತರ ವಿದೇಶಿ ಆಡಳಿತದ ಪ್ರಭಾವ ದುರ್ಬಲವಾದಾಗ ಸ್ಥಳನಾಮವನ್ನು ಪೂರ್ವಸ್ಥಿತಿಗೆ ಮರಳಿಸುವ ಪ್ರಯತ್ನವನ್ನು ಸರಕಾರಗಳು ಮಾಡಲಿಲ್ಲ, ಬದಲಾಗಿ ವಿದೇಶಿಯರು ಬಳಸುವ ಉಚ್ಛಾರವನ್ನೇ ಅಭಿಮಾನದಿಂದ ಬಳಸುವ ಸ್ಥಿತಿಗೆ ಬಂತು. ಇಂದು ಆಂಗ್ಲ ಮಾಧ್ಯಮ ಶಿಕ್ಷಣದ ಪ್ರಭಾವ ಇರುವವರೊಡನೆ ಮಾತನಾಡಿದಾಗ ಮಂಗಳೂರು ಎಂಬುದನ್ನು ಮೇಂಗ್ಳೂರ್ ಎನ್ನದಿದ್ದರೆ ನಾವು ಯಾವುದೋ ಅನಾಗರಿಕ ಎನ್ನುವಂತೆ ಕೆಲವರು ನೋಡುವುದಿದೆ. ಹಾಗಾಗಿ ಇಂದು ಯಾವ ಜಾತಿ-ಮತ-ಭಾಷೆಯ ಭೇದವಿಲ್ಲದೆ ಆಂಗ್ಲೀಕೃತ ಸ್ಥಳನಾಮ ಬಳಸುವುದು ಘನತೆಯ ಪ್ರತೀಕ. ಆದರೂ ಕನ್ನಡ ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಸ್ಥಳನಾಮಗಳನ್ನು ಯಥಾವತ್ತಾಗಿ ಬರೆಯುವುದನ್ನು ಗಮನಿಸಬಹುದು. ಅದರ ಜೊತೆಯಲ್ಲಿ ಇರಬಹುದಾದ ಇಂಗ್ಲೀಷ್ ಅನುವಾದಕ್ಕೆ ಯಾವುದೇ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲದಂತೆ ಅಪಭ್ರಂಶವಾಗಿರುತ್ತದೆ. ಉದಾಹರಣೆಗೆ ಅಧಿಕೃತವಾಗಿ ಕನ್ನಡದಲ್ಲಿ ಬೆಂಗಳೂರು, ಇಂಗ್ಲೀಷ್‌ನಲ್ಲಿ‌ Bangalore (ಬಂಗಳೋರ್ - ಉಚ್ಚಾರಣೆ : ಬೇಂಗ್ಳೋರ್), Bengaluru ಎಂಬುದನ್ನು ಸ್ವತಃ ಸರಕಾರವೇ ಬಳಸುತ್ತಿಲ್ಲ. ಹೀಗಿರುವಾಗ ಸಾರ್ವಜನಿಕರು ಬಳಸುವರೇ? ಇವಿಷ್ಟು ವಿದೇಶಿಯರ ಪ್ರಭಾವದಿಂದಾಗಿ... 

ಹಿಂದಿನ ದಿನಗಳಲ್ಲಿ ಸ್ಥಳನಾಮಗಳ ಮೇಲೆ ವಿದೇಶಿ ಪ್ರಭಾವ ಉಂಟಾದ ಹಾಗೆ ಇಂದು ವಿದೇಶಿ ಪ್ರಭಾವ ಇಲ್ಲ‌. ಆದರೆ ಇಂದು ಸ್ಥಳನಾಮಗಳು ಸ್ವದೇಶಿಯರಿಂದಲೇ ಅಪಭ್ರಂಶಗೊಳ್ಳುತ್ತಿದೆ. ಇದಕ್ಕೆ ಮೂಲಕಾರಣ ದೇಶದೊಳಗಿನ ಅವೈಜ್ಞಾನಿಕ ವಲಸೆಗಳು. ಆರಂಭದಲ್ಲಿ ಹೇಳಿದಂತೆ ಭಾರತದ ಪ್ರತಿ ಪ್ರದೇಶವು ತನ್ನದೇ ರೀತಿಯಲ್ಲಿ ಸಾಂಸ್ಕೃತಿಕವಾಗಿ ಸಂಪನ್ನವಾಗಿದೆ. ಒಂದು ಪ್ರದೇಶದಿಂದ ಉದ್ಯೋಗ, ಶಿಕ್ಷಣ, ಇನ್ನಿತರೆ ಮೂಲಭೂತ ಅಗತ್ಯಗಳಿಗಾಗಿ ಅಥವಾ ಪ್ರಾಕೃತಿಕ ದುರಂತಗಳಿಂದಾಗಿ ಸ್ವಂತ ಊರನ್ನು ತ್ಯಜಿಸಿ ಇನ್ನೊಂದು ಪ್ರದೇಶಕ್ಕೆ ವಲಸೆಹೋಗುವುದು ನಾಗರಿಕತೆಯ ಆರಂಭದಿಂದಲೂ ಸಾಮಾನ್ಯ ಸಂಗತಿ. ಹಾಗಾಗಿ ವಲಸೆ ಎಂದಿಗೂ ತಪ್ಪಲ್ಲ. ಇತ್ತೀಚೆಗೆ ಭಾರತದೊಳಗೆ ವಲಸೆ ಎಂಬುದು ಸಾಂವಿಧಾನಿಕ ಹಕ್ಕು ಕೂಡ ಹೌದು. ಆದರೆ ಒಂದು ಪ್ರದೇಶದ ಜನರು ಇನ್ನೊಂದು ಪ್ರದೇಶಕ್ಕೆ ವಲಸೆ ಬಂದ ನಂತರ ಅಲ್ಲಿನ ಮೂಲಭೂತ ಸಂಸ್ಕೃತಿಯನ್ನು ನಾಶಮಾಡುವ ಕಾರ್ಯವನ್ನು ಮಾಡುವುದು ಅಥವಾ ತಮ್ಮ ಸಂಸ್ಕೃತಿಯನ್ನು ಅಲ್ಲಿನ ಮೂಲನಿವಾಸಿಗಳ ಮೇಲೆ ಹೇರುವುದಾದರೆ ಅದು ಅವೈಜ್ಞಾನಿಕ ವಲಸೆ. ಇಂತಹ ವಲಸೆಗಳು ನಿಜವಾಗಿ ವಲಸೆಯಲ್ಲ; ಆಂತರಿಕ ವಸಾಹತುಶಾಹಿತ್ವ. 

ಎರಡು ತಿಂಗಳ ಹಿಂದೆ ಕರ್ನಾಟಕ ಮತ್ತು ಕೇರಳದಾದ್ಯಂತ ಚರ್ಚೆಯಾದ ಒಂದು ವಿಷಯ. ಕೇರಳ ಸರಕಾರ ಕಾಸರಗೋಡಿನ ಕನ್ನಡ ಹಿನ್ನೆಲೆಯ ಸ್ಥಳನಾಮಗಳನ್ನು ಬದಲಾವಣೆ ಮಾಡಲು ಹೊರಟಿದೆ ಎಂದು. ಸಾಮಾಜಿಕ ತಾಣಗಳ‌ ಮೂಲಕ ಈ ಚರ್ಚೆ ಕರ್ನಾಟಕ ಸರಕಾರಕ್ಕೆ ತಲುಪಿತು. ರಾಜಕೀಯ ವ್ಯತ್ಯಾಸವಿಲ್ಲದೆ ಕೇರಳ ಸರಕಾರಕ್ಕೆ ಎದುರಾಗಿ ಕರ್ನಾಟಕದಿಂದ ಪ್ರತಿಭಟನೆ ವ್ಯಕ್ತವಾಯಿತು. ಸ್ವತಃ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇದರ ಕುರಿತು ಕೇರಳದ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದರು. ಇದಕ್ಕೆ ಪ್ರತಿಯಾಗಿ ಕೇರಳ ಸರಕಾರದ ಮುಂದೆ ಸ್ಥಳನಾಮ ಬದಲಾವಣೆ ಮಾಡುವ ಯಾವುದೇ ಪ್ರಸ್ತಾಪ ಅಥವಾ ಚರ್ಚೆ ಇಲ್ಲ ಎಂದು ಕೇರಳ ಸರಕಾರ ಘೋಷಣೆ ಮಾಡಿತು. ಅಲ್ಲಿಗೆ ಎಲ್ಲಾ ವಿಷಯವೂ ತಣ್ಣಗಾಯಿತು. ಆದರೆ ನಡೆದದ್ದು ಏನು...? ಬಹುಶಃ ಕಾಸರಗೋಡಿನಲ್ಲಿ ನಡೆಯುವ ವಿಷಯ ತಿರುವನಂತಪುರಂನಲ್ಲಿರುವವರಿಗೂ ಗೊತ್ತಿಲ್ಲ, ಬೆಂಗಳೂರಿನಲ್ಲಿರುವವರಿಗೂ ಗೊತ್ತಿಲ್ಲ. ನಿಜ ಹೇಳಿದರೆ, ಈ ವಿಷಯದಲ್ಲಿ ರಾಜಕಾರಣಿಗಳು ಮುಗ್ಧರು. ಕಾಸರಗೋಡಿನ ಅನೇಕ ಮಂದಿ ನಡೆದ ಅಥವಾ ನಡೆಯುತ್ತಿರುವ ಘಟನೆಯನ್ನು ತದನಂತರ ವಿವರಿಸಿದಾಗ ಅದನ್ನು ಕೇಳುವವರು ಯಾರೂ ಇರಲಿಲ್ಲ. 

ನಡೆದ ಘಟನೆ ಏನು ?

ಸಾಮಾನ್ಯವಾಗಿ ಒಂದು ಪ್ರದೇಶದ ಸ್ಥಳನಾಮ ಬದಲಾವಣೆ ಮಾಡಲು ಆ ಪ್ರದೇಶದ ಸ್ಥಳಿಯಾಡಳಿತ ಇಲಾಖೆಯು ಜಿಲ್ಲೆಯ ಕಂದಾಯ ಅಧಿಕಾರಿಯ ಮೂಲಕ ಕಂದಾಯ ಸಚಿವರಿಗೆ ಮನವಿ ಮಾಡಬೇಕು. ವಿವಿಧ ಹಂತಗಳಲ್ಲಿ ಸ್ಥಳನಾಮ ಬದಲಾವಣೆ ಅನುಮೋದನೆಗೊಂಡು ಅಂತಿಮವಾಗಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗುತ್ತದೆ. ಕೇಂದ್ರ ಸರಕಾರ ಅನುಮತಿ ನೀಡಿದರೆ ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸುವ ಸ್ಥಳನಾಮ ಬದಲಾವಣೆ ಮಾಡಬಹುದು. ಆದರೆ ಕಾಸರಗೋಡಿನ ಸ್ಥಳನಾಮ ಬದಲಾವಣೆ ಈ ತರಹದ ಅಧಿಕೃತ ಬದಲಾವಣೆ ಅಲ್ಲ. ಕೇರಳ ರಾಜ್ಯ ರೂಪೀಕರಣದ ತನಕ ಕನ್ನಡದಲ್ಲಿ ಮಾತ್ರ ಇದ್ದ ಕಾಸರಗೋಡಿನ ಸರಕಾರಿ ಕಡತಗಳು ಕನ್ನಡ ಬಾರದ ಅಧಿಕಾರಗಳ ಅನುವಾದದಿಂದ ಸಣ್ಣ ಪ್ರಮಾಣದಲ್ಲಿ ಅಪಭ್ರಂಶುಗೊಳ್ಳುಲು ಆರಂಭ ಆಯ್ತು. 2010 ರ ಈಚೆಗೆ ಡಿಜಿಟಲೀಕರಣದ ಭಾಗವಾಗಿ ಪ್ರತಿ ಇಲಾಖೆಯ ಕನ್ನಡ ಬಾರದ ಅಧಿಕಾರಿಗಳು ಡಿಜಿಟಲೀಕರದ ಹೆಸರಿನಲ್ಲಿ ತಮ್ಮ ಉಚ್ಚಾರಕ್ಕೆ ಯೋಗ್ಯವಾದಂತೆ ಸ್ಥಳನಾಮ ಕಡತಗಳಿಗೆ ಬದಲಾಯಿಸಿದರು. ಉದಾಹರಣೆಗೆ ಕಾಸರಗೋಡು (Kasaragod) ಸರಕಾರದ ವಿವಿಧ ಕಡತದಲ್ಲಿ ಪಡೆದ ರೂಪಗಳು ಈ ರೀತಿ ಇದೆ.... Kasargod, Kasaragode, Kasargode, Kasarakode ಇತ್ಯಾದಿ. ಕಾಸರಗೋಡು ಹೆಚ್ಚು ಕಡಿಮೆ ಎಲ್ಲಾ ಗ್ರಾಮಗಳ ಹೆಸರು ಇದೇ ರೀತಿ ಹಂತ ಹಂತವಾಗಿ ಅಪಭ್ರಂಶುಗೊಂಡಿದೆ. ಎಷ್ಟರ ಮಟ್ಟಿಗೆ ಅಪಭ್ರಂಶುವಾಗಿದೆ ಎಂದರೆ...‌ ಸರಿಯಾದ ಹೆಸರನ್ನು ಸಾಧಿಸಲು ಕಡತಗಳೇ ಇಲ್ಲ ಎನ್ನುವಂತಾಗಿದೆ, ಇಲ್ಲಿ ಹುಟ್ಟಿಬೆಳೆಯುವ ಕನ್ನಡ ಮಕ್ಕಳೂ ಅಪಭ್ರಂಶವಾದ ಸ್ಥಳನಾಮ ಸರಿ ಎಂದೇ ನಂಬುತ್ತಿದ್ದಾರೆ. ಏನಿದ್ದರೂ ಸ್ಥಳನಾಮ ಬದಲಾವಣೆ ಆಗಿರುವುದು ಮತ್ತು ಆಗುತ್ತಿರುವುದು ಸತ್ಯ. ಆದರೆ ಕೇರಳ ಸರಕಾರದ ಮೌನ ಸಮ್ಮತಿ ಇದೆಯೋ ಅಥವಾ ನಿಜವಾಗಿ ಮುಗ್ದರೋ ಎಂಬುದು ಗೊತ್ತಿಲ್ಲ. ಏನಿದ್ದರೂ ನಡೆಯುತ್ತಿರುವ ಕಾರ್ಯ ಸಂವಿಧಾನ ವಿರೋಧಿ.

ಸ್ಥಳನಾಮ ಅಪಭ್ರಂಶುಗೊಂಡರೆ ಅದು ಒಂದು ಸಂಸ್ಕೃತಿಯನ್ನು ಮಣ್ಣುಹಾಕಿ ಮುಚ್ಚಿದಂತೆ. ಹೆಸರಿನ ಜೀವಂತಿಕೆಯನ್ನು ಉಳಿಸಿದಿದ್ದರೆ ದೇಶದ ಪರಂಪರೆಯನ್ನು ನಾಶಮಾಡಿದಂತೆ ಅಲ್ಲವೇ? ಸಾಮಾನ್ಯವಾಗಿ ನಮ್ಮ ಹೆಸರಿನ ನೈಜ ಉಚ್ಚಾರಣೆ, ಅಕ್ಷರ ಜೋಡನೆ ಬದಲಾವಣೆ ಮಾಡಿದರೆ ಅದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆಗುದಿಲ್ಲವೇ? ಸ್ಥಳನಾಮವೂ ಹಾಗೆ...

ಸ್ಥಳನಾಮ ದಾಖಲೀಕರಣ ಅಥವಾ ಸಂರಕ್ಷಣೆಯ ಜವಾಬ್ದಾರಿ ಆ ಪ್ರದೇಶದ ಜನರದ್ದು. ವಿಕಿಪೀಡಿಯ ಯೋಜನೆಯು ಇದಕ್ಕೆ ಒಂದು ಉತ್ತಮ ವೇದಿಕೆ. ಸ್ಥಳನಾಮಗಳ ದಾಖಲೀಕರಣಕ್ಕೆ ಬೇಕಾದ ರೀತಿಯಲ್ಲಿ ವಿಕಿಪೀಡಿಯ ಪುಟ ಹೊಂದಿಕೊಳ್ಳುತ್ತದೆ. ಹಾಗೂ ಇದು ಉಚಿತ ಹಾಗೂ ಮುಕ್ತ ಬಳಕೆಯ ಜಾಲತಾಣವಾಗಿದೆ. 

ಮಂಗಳೂರಿಗೆ ಕೇರಳದಲ್ಲಿರುವ ಹೆಸರು ಮಂಙಲಾಪುರಂ ಎಂದು. ಕನ್ನಡಿಗರು ಕೆರಳದ ಕಣ್ಣೂರ್ ಜಿಲ್ಲೆಯನ್ನು ಕಣ್ಣೂರು ಎಂದು ಬಳಸುವುದಿದೆ. ಹಾಗಾಗಿ ಅಪಭ್ರಂಶಗೊಳಿಸುವುದು ಯಾವುದೇ ಒಂದು ವಿಭಾಗದವರಲ್ಲ.‌ ನಮ್ಮ ಜ್ಞಾನದ ಕೊರತೆ ಅಥವಾ ಅಹಂಕಾರದ ಹೆಚ್ಚಳ‌ ಇದಕ್ಕೆ ಕಾರಣ.

ಒಂದು ಪ್ರದೇಶದ ಮೂಲ ಸಂಸ್ಕೃತಿಯನ್ನು ವಿರೋಧಿಸುವವರು ಅಥವಾ ನಾಶಮಾಡಲು ಪ್ರಯತ್ನ ಪಡುವವರು ಯಾವ ಭಾಷಿಕರಾದರೂ ಅದು ತಪ್ಪು (ಕನ್ನಡಿಗರಾದರೂ ಕೂಡ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ