ಕನ್ನಡ ನಾಡು ಕಾಲ ಕಾಲದಿಂದಲೂ ಶಿಕ್ಷಣ ಕ್ಷೇತ್ರಕ್ಕೆ ಉದಾರವಾದ ನೀತಿಯನ್ನು ರೂಪಿಸುತ್ತಾ ಬಂದಿದೆ. ಸಾಮಾನ್ಯ ಶಿಕ್ಷಣ, ತಾಂತ್ರಿಕ ಶಿಕ್ಷಣ ಅಥವಾ ವೈದ್ಯಕೀಯ ಶಿಕ್ಷಣದಂತಹ ಯಾವುದೇ ಉಪವಿಭಾಗವೇ ಇರಲಿ, ತನ್ನ ವೈಯಕ್ತಿಕ ಸಮಸ್ಯೆಗಳನ್ನು ಲೆಕ್ಕಿಸದ ಸಾಮಾನ್ಯ ನಾಗರಿಕನಿಗೆ ಇಲ್ಲಿ ಶಿಕ್ಷಣ ಪಡೆಯುವುದು ಕಷ್ಟದ ಕೆಲಸವೇನು ಅಲ್ಲ. ಶಿಕ್ಷಣ ಸಂಸ್ಥೆಗಳಿಗೆ ಯಾವ ಕೊರತೆಯೂ ಇಲ್ಲ. ಆದರೆ ಪ್ರಾದೇಶಿಕ ಶಿಕ್ಷಣಾರ್ಥಿಗಳಿಗೆ ಭಾರೀ ಕೊರತೆ ಇರುವುದು ನೈಜಸತ್ಯ. ಕರ್ನಾಟಕದ ನೆರೆ-ರಾಜ್ಯಗಳು ಮತ್ತು ಇತರೆ ರಾಜ್ಯಗಳು ಶಿಕ್ಷಣ ಕ್ಷೇತ್ರದ ಮೇಲೆ ಹೇರುವ ನಿರ್ಬಂಧನೆ ಅಥವಾ ಅಸರ್ಮಕ ನೀತಿಯ ಪ್ರಭಾವದಿಂದ ಕರ್ನಾಟಕವು ಅನ್ಯರಾಜ್ಯದ ವಿದ್ಯಾರ್ಥಿಗಳ ಶೈಕ್ಷಣಿಕ ವಲಸೆಯ ಕೇಂದ್ರವಾಗಿದೆ. ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವ ರಾಜ್ಯದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿನ ಕುಸಿತ ಹಾಗೂ ಅನ್ಯರಾಜ್ಯ ವಿದ್ಯಾರ್ಥಿಗಳ ಪ್ರಾಮಾಣದ ಏರಿಕೆಯನ್ನು ನೋಡಿದಾಗ "ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್" ಎಂಬ ಕವಿರಾಜಮಾರ್ಗಕಾರನ ಮಾತು ನೆನಪಾಗುತ್ತದೆ. ಈ ಹೊಗಳಿಕೆಯ ಮಾತಿನಿಂದ ಪ್ರಭಾವಿತನಾದ ಕನ್ನಡಿಗನು ಉನ್ನತ ಶಿಕ್ಷಣದಿಂದ ಹಿಂದೆ ಸರಿದನೋ? ಗೊತ್ತಿಲ್ಲ. ̳̳
31 ಜಿಲ್ಲೆಗಳಿರುವ ಕರ್ನಾಟಕದಲ್ಲಿ 41 ಸರ್ಕಾರಿ ವಿವಿ, 27 ಖಾಸಗಿ ವಿವಿ, 11 ಪರಿಗಣಿತ ವಿವಿ ಹಾಗೂ 1 ಕೇಂದ್ರಿಯ ವಿವಿ, 1 ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ವಿವಿ ಸೇರಿ ಒಟ್ಟು 112 ವಿವಿಗಳಿವೆ. ಕರ್ನಾಟಕವನ್ನು ಭಾರತೀಯ ವಿಶ್ವವಿದ್ಯಾನಿಲಯಗಳ ರಾಜಧಾನಿ ಎಂದು ಕರೆದರೂ ಅತಿಶಯೋಕ್ತಿ ಇಲ್ಲ. ಉನ್ನತ ಶಿಕ್ಷಣ ಕ್ಷೇತ್ರದ ಇಷ್ಟು ದೊಡ್ಡ ಸಾಧನೆ ಕೇವಲ ಇಂದು ನಿನ್ನೆಯ ಕ್ರಾಂತಿಯಲ್ಲ. ಬದಲಾಗಿ, ರಾಜಪ್ರಭುತ್ವದಿಂದ ತೊಡಗಿ ಇಂದಿನ ಪ್ರಜಾಪ್ರಭುತ್ವದ ಮೂಲಕ ಹರಿದು ಬಂದ ಸಂಸ್ಕೃತಿಯ ಹರಿವು. ದಿನದಿಂದ ದಿನಕ್ಕೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಬದಲಾವಣೆಗಳು ಆಗುತ್ತಾ ಹೋದರೂ ಕರ್ನಾಟಕದ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಿವಿಗಳು ಸಮಸ್ಯೆಗಳ ಸರಮಾಲೆಯಲ್ಲಿ ಗಂಟುಕಟ್ಟಿಕೊಂಡಿದೆ. ಸಂಶೋಧನೆಯ ಪ್ರಮುಖ ಕೇಂದ್ರಗಳಾಗಿದ್ದ ಸರ್ಕಾರಿ ವಿವಿಗಳು ಇಂದು ಕೇವಲ ನಿರುದ್ಯೋಗಿ ಪದವೀಧರರನ್ನು ಉತ್ಪಾದಿಸುವ ಕಾರ್ಖಾನೆಗಳಾಗಿವೆ. ವಿವಿಗಳಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪ್ರತಿಕ್ರಿಯಿಸುವಲ್ಲಿ ವಿವಿಗಳು ಮೂಕವಾಗಿದೆ. ಆಡಳಿತಾತ್ಮಕ ಸಮಸ್ಯೆ ಆದರೂ ಶೈಕ್ಷಣಿಕ ಸಮಸ್ಯೆ ಆದರೂ ವಿವಿಯು ಜಪಿಸುವ ಮಂತ್ರ "ಆರ್ಥಿಕ ಸಮಸ್ಯೆ, ಆರ್ಥಿಕ ಬಿಕ್ಕಟ್ಟು" ಇದೊಂದೆ.
ವಿಶ್ವವಿದ್ಯಾನಿಲಯಗಳ ಉತ್ತಮ ಕಾರ್ಯನಿರ್ವಹಣೆಗಾಗಿ ಶೈಕ್ಷಣಿಕವಾದ ತೀರ್ಮಾನಗಳನ್ನು ಕೈಗೊಳ್ಳಲು ಆಡಳಿತ ಸ್ವಾಯತ್ತತೆ ನೀಡುವುದು ಅತ್ಯಗತ್ಯ. ಆದರೆ ಸರಕಾರವು ಸರ್ಕಾರಿ ವಿವಿಗಳನ್ನು ತೊಟ್ಟಿಲ ಮಗುವಿನಂತೆ ನೋಡುತ್ತಾ ಬಂದಿದೆ. ವಿಚಿತ್ರವೆಂದರೆ ಕಾಲೇಜುಗಳಿಗೆ ಸ್ವಾಯತ್ತತೆ ಕಲ್ಪಿಸುವ ವಿವಿಗಳಿಗೆ ಸ್ವಾಯತ್ತತೆ ಇಲ್ಲದಾಗಿದೆ. ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡುವುದರಿಂದ ಹಿಡಿದು ಫಲಿತಾಂಶ ಪ್ರಕಟಿಸುವ ತನಕ, ಅಥವಾ ಅದಕ್ಕೂ ಆಚೆ ವಿವಿಯ ಘಟಿಕೋತ್ಸವದ ದಿನಾಂಕ ತೀರ್ಮಾನಿಸುವ ತನಕ ಹೆಜ್ಜೆ-ಹೆಜ್ಜೆಗೂ ವಿವಿಯು ಸರ್ಕಾರದ ಮಾರ್ಗದರ್ಶನ/ಅನುಮತಿ ಪಡೆಯುವುದು ಅನಿವಾರ್ಯವಾಗಿದೆ. ಸರ್ಕಾರದ ಶಿಕ್ಷಣ ನೀತಿ, ಆರ್ಥಿಕ ನೀತಿ, ರಾಜಕೀಯ ನೀತಿ ಮೊದಲಾದ ನೀತಿ-ನಿಯಮಗಳ ಹೇರಿಕೆಯ ಪ್ರಭಾವದಿಂದ ವಿವಿಗಳಿಗ ಸ್ವಂತಿಕೆ ಕಳೆದುಕೊಂಡಿದೆ. ರಾಜ್ಯ ಮಟ್ಟದಲ್ಲಿ ಅಥವಾ ರಾಷ್ಟ್ರಮಟ್ಟದಲ್ಲಿರುವ ವಿವಿಧ ಸೆಕೆಂಡರಿ ಶಿಕ್ಷಣ ಬೋರ್ಡ್‌ಗಳು ಅಥವಾ ಪದವಿ ಪೂರ್ವ ಶಿಕ್ಷಣ ಬೋರ್ಡ್‌ಗಳ ಕೇಂದ್ರೀಕೃತ ವ್ಯವಸ್ಥೆ ಇದೆ. ಆದರೆ ಉನ್ನತ ಶಿಕ್ಷಣದಲ್ಲಿ ಸಾಮಾನ್ಯವಾಗಿ ಸಣ್ಣ ಭೌಗೋಳಿಕ ಪ್ರದೇಶಗಳಿಗೆ ಸೀಮಿತವಾಗುವಂತೆ ವಿಶ್ವವಿದ್ಯಾನಿಲಯ ಎಂಬ ಕಲ್ಪನೆ ಯಾಕೆ ಹುಟ್ಟುಹಾಕಿರಬಹುದು ಎಂಬ ಪ್ರಶ್ನೆಯ ಉತ್ತರ ಜನರು ನೆನಪಿಸಿಕೊಳ್ಳಬೇಕಾಗಿದೆ. ವಿವಿಗಳು ಕೇವಲ ಪರೀಕ್ಷೆ ಮಾಡಿ ಪದವಿ ಕೊಡುವ ಸಂಸ್ಥೆಯಲ್ಲ ಎನ್ನುವುದು ವಿವಿಗಳೇ ಅರ್ಥಮಾಡಿಕೊಳ್ಳಬೇಕಿದೆ. ವಿವಿಯ ಉದ್ದೇಶ ಅಷ್ಟು ಮಾತ್ರವಾಗಿದ್ದರೆ ರಾಜ್ಯಕ್ಕೊಂದು ವಿವಿಯನ್ನು ಸೀಮಿತಗೊಳಿಸಿ ಏಕರೂಪದ ಪಠ್ಯಕ್ರಮ, ಪರೀಕ್ಷೆ ಮಾಡಿಸಿ ಆಯಾ ಕಾಲೇಜುಗಳ ಮೂಲಕ ಪರೀಕ್ಷೆ ಮಾಡಿಸಿ ಪದವಿ ಪ್ರದಾನ ಮಾಡಿಸಬಹುದಿತ್ತು. ಅತ್ಯಗತ್ಯ ಎಂದೆನಿಸಿದರೆ ಜಿಲ್ಲಾ ಕೇಂದ್ರದಲ್ಲೊಂದು ಸಣ್ಣ ಕಚೇರಿಯೊಂದನ್ನು ಹಾಕಿ ವ್ಯವಸ್ಥೆಯ ಮೇಲೆ ನಿಯಂತ್ರಣ ಸಾಧಿಸಬಹುದಿತ್ತು. ಅದೆಷ್ಟೋ ಕೋಟಿ ಹಣ ಬೊಕ್ಕಸಕ್ಕೆ ಉಳಿಸಬಹುದಿತ್ತು. ಪ್ರತಿಯೊಂದು ವಿವಿಯು ವೈವಿದ್ಯತೆಯ ಕೇಂದ್ರವಾಗಬೇಕಿದೆ. ಶೈಕ್ಷಣಿಕ ಚೌಕಟ್ಟುಗಳು ಅಗತ್ಯ. ಹಾಗೆಂದ ಮಾತ್ರಕ್ಕೆ ಅದು ವಿವಿಯ ಸ್ವತಂತ್ರ ಚಿಂತನೆಗೆ ಮತ್ತು ಕಾರ್ಯಗಳಿಗೆ ಅಡ್ಡಗೋಲು ಹಾಕುವಂತಿರಬಾರದು. ಪಠ್ಯಕ್ರಮ ರಚನೆಯಲ್ಲಿ ಸರ್ಕಾರದ ಸಲಹೆಗಳು ಸ್ವಾಗತಾರ್ಹ. ಆದರೆ ಏಕಿಕೃತ ಪಠ್ಯಕ್ರಮ ಅಥವಾ ಪಠ್ಯಕ್ರಮದ ಹೇರಿಕೆ ವಿವಿಗಳ ರಚನೆಯ ಮೂಲ ಆಶಯಕ್ಕೆ ವಿರುದ್ಧವಾದುದು. ಇತ್ತೀಚೆಗೆ ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ವಿವಿಗಳಿಗೆ ನಕಲಿ ಅಂಕಪಟ್ಟಿ ಹಾವಳಿಯನ್ನು ತಡೆಯುವ ನೆಪವೊಡ್ಡಿ ಹೊರಡಿಸಿದ ಸುತ್ತೋಲೆಯ ಪ್ರಕಾರ ವಿವಿಗಳು ಅಂಕಪಟ್ಟಿಯನ್ನು ಮುದ್ರಿಸಬಾರದು, ಬದಲಾಗಿ ಡಿಜಿಲಾಕರ್ ಮೂಲಕ ಮಾತ್ರ ನೀಡಬೇಕು. ಇಲಿ ಕಾಟ ತಪ್ಪಿಸಲು ಮನೆಗೆ ಬೆಂಕಿ ಹಾಕಿದರೆ ಆದೀತೆ? ಡಿಜಿಲಾಕರ್ ಜಾಗತಿಕ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟಿಲ್ಲ ಎಂಬುದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿದಿಲ್ಲವೇ? ಸರ್ಕಾರದ ಸುತ್ತೋಲೆಯನ್ನು ಓದಿದ ವಿವಿಯು "ಹೋರಿಗೆ ಹೆರಿಗೆ ಆಯ್ತು ಅಂತ ಕೇಳಿದೊಡನೆ ಮರಿಯನ್ನು ಕಟ್ಟಲು ಹಗ್ಗಕ್ಕೆ ಅಲೆದಾಡಿದಂತೆ" ಅಂಕಪಟ್ಟಿ ಮುದ್ರಣ ಸ್ಥಗಿತ ಮಾಡಿ ಕುಳಿತುಕೊಂಡಿದೆ. ಅಂಕಪಟ್ಟಿ ಮುದ್ರಿಸಬೇಕೋ ಬೇಡವೋ ಅಥವಾ ಯಾವ ಬಣ್ಣದಲ್ಲಿ, ಯಾವ ಶೈಲಿಯಲ್ಲಿ, ಯಾವ ಕಾಗದದಲ್ಲಿ ಮುದ್ರಿಸಬೇಕು ಎನ್ನುವುದನ್ನು ತೀರ್ಮಾನಿಸುವ ಅಧಿಕಾರ ವಿಧಾನಸಭೆಯ ಕಾನೂನಿನಡಿಯಲ್ಲಿ ಸ್ಥಾಪಿತಗೊಂಡಿರುವ ವಿವಿಯ ಸಿಂಡಿಕೇಟ್ ಮತ್ತ ಶೈಕ್ಷಣಿಕ ಮಂಡಳಿಗೆ ಇಲ್ಲವೆಂದಾದರೆ ಅವುಗಳ ಅಗತ್ಯವೇನು? ಅಂಕಪಟ್ಟಿ ಮುದ್ರಣ ಸರ್ಕಾರದ ಅನುದಾನದಿಂದ ನಡೆಯುವ ಕೆಲಸವೂ ಅಲ್ಲ. ಅವು ವಿದ್ಯಾರ್ಥಿಗಳಿಂದ ನೇರವಾಗಿ ಪಡೆಯುವ ಅಂಕಪಟ್ಟಿ ಶುಲ್ಕದಿಂದ ನಡೆಯುತ್ತಿದ್ದ ಕೆಲಸ. ಆದರೆ ಇತ್ತೀಚೆಗೆ ಕಳೆದ 2-3 ವರ್ಷಗಳಿಂದ ವಿದ್ಯಾರ್ಥಿಗಳು ಮುದ್ರಿತ ಅಂಕಪಟ್ಟಿಯಿಂದ ವಂಚಿತರು. ವಿಶ್ವವಿದ್ಯಾನಿಲಯವು ಅಂಕಪಟ್ಟಿ ಮುದ್ರಂಕ್ಕೆ ಪಡೆಯುತ್ತಿದ್ದ ಶುಲ್ಕವನ್ನು ಇತ್ತೀಚೆಗೆ ಡಿಜಿಟಲ್ ಅಂಕಪಟ್ಟಿ ಪ್ರೋಸೆಸಿಂಗ್ ಶುಲ್ಕ ಎಂದು ಬದಲಾಯಿಸಿ ತನ್ನ ಇತರೆ ಮೂಲದ ಆರ್ಥಿಕ ಬಿಕ್ಕಟ್ಟುನ್ನು ಸರಿಪಡಿಸುವ ಸಲುವಾಗಿ ವಿದ್ಯಾರ್ಥಿಗಳನ್ನು ಮಂಗ ಮಾಡುತ್ತಿದೆ. ಇಷ್ಟಕ್ಕೂ ಈ ಡಿಜಿಟಲ್ ಅಂಕಪಟ್ಟಿ ಪ್ರೋಸೆಸಿಂಗ್ ಎಂಬ ಹೆಸರಿನಲ್ಲಿ ವಿವಿಯು ಮಾಡುವ ಕಾರ್ಯವೇನು? ರಾಜ್ಯ ಸರ್ಕಾರದ ಏಕೀಕೃತ ವಿಶ್ವವಿದ್ಯಾನಿಲಯ ನಿರ್ವಹಣೆಯ ಪೋರ್ಟಲ್‌ನಲ್ಲಿ ನಮೂದಿಸಲಾದ ಅಂಕಗಳನ್ನು ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಮೂಲಕ ಡಿಜಿಲಾಕರ್‌ಗೆ ವರ್ಗಾಯಿಸುವ ಪ್ರಕ್ರಿಯೆ. ಅಂಕಪಟ್ಟಿ ಮುದ್ರಣಕ್ಕೆ ಹೋಲಿಸಿದರೆ ಈ ಪ್ರಕ್ರಿಯೆಗೆ ಕಂಪ್ಯೂಟರ್ ಸೆಂಟರ್‌ನ ತಾತ್ಕಾಲಿಕ ಸಹಕಾರಕ್ಕಿಂತ ಮಿಗಿಲಾಗಿ ಹೆಚ್ಚಿನ ಯಾವುದೇ ಹೊರೆಯಿಲ್ಲ. ಇನ್ನೊಂದು ಪ್ರಮುಖ ವಿಷಯವೇನೆಂದರೆ ಮಂಗಳೂರು ವಿವಿಯೇ ರಚಿಸಿ ಸರ್ಕಾರದಿಂದ ಮಾನ್ಯತೆ ಪಡೆದ ಅಧಿನಿಯಮದ ಪ್ರಕಾರ ರಚಿಸಿದ ಗ್ರೇಡಿಂಗ್ ಸೂತ್ರವನ್ನು ಯು.ಯು.ಸಿ.ಎಂ.ಎಸ್ ಪೋರ್ಟಲ್‌ನ ತಾಂತ್ರಿಕ ನೆಪವೊಡ್ಡಿ ತಪ್ಪಾದ ಗ್ರೇಡಿಂಗ್‌ನನ್ನು ಡಿಜಿಲಾಕರ್ ಮೂಲಕ ಅಪ್‌ಲೋಡ್ ಮಾಡಿ ಭವಿಷ್ಯದಲ್ಲಿ ಸಿಂಧುತ್ವ ಕಳೆದುಕೊಳ್ಳಬಹುದಾದ ಅಂಕಪಟ್ಟಿಯನ್ನು ವಿವಿ ಸೃಸ್ಟಿಸುತ್ತಿದೆ ಎಂಬುದು ಆತಂಕಕಾರಿ ವಿಚಾರ. ಈ ವಿಷಯಗಳು ಚರ್ಚೆಗೆ ಬರುವುದಿಲ್ಲ ಎಂಬುದು ವಿಪರ್ಯಾಸ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ