ಹಗಲು      ರಾತ್ರಿ

ಶನಿವಾರ, ಡಿಸೆಂಬರ್ 16, 2023

ಸಾಗರ ಭೂವಿಜ್ಞಾನ

ಓರ್ವ ಸಾಗರ ಭೂವಿಜ್ಞಾನ ವಿದ್ಯಾರ್ಥಿಯಾಗಿ ಸಾಗರ ಭೂವಿಜ್ಞಾನದ ಕುರಿತೊಂದು ಕನ್ನಡ ಲೇಖನ ಬರೆಯುವುದು ನನ್ನ ಧರ್ಮ. ಇದೀಗ ನಾನು ಸ್ನಾತಕೋತ್ತರ ಪದವಿ ಹಂತದಲ್ಲಿ ಎರಡು ವರ್ಷದ ಎಂ.ಎಸ್ಸಿ ಮರೈನ್‌ ಜಿಯೋಲಜಿ ಅಥವಾ ಎಂ.ಎಸ್ಸಿ ಸಾಗರ ಭೂವಿಜ್ಞಾನದ ಅಂತಿಮ ವರ್ಷದಲ್ಲಿರುವೆನು. ಈಗಾಗಲೇ ಈ ಕುರಿತೊಂದು ಲೇಖನ ಬರೆದು ಪ್ರಕಟಿಸಬೇಕಿತ್ತು. ಆದರೆ ಮರ್ಕಟ ಮನಸ್ಸು ಬಿಡುವುದುಂಟೇ..? ಆದರೆ ತಡವಾದ ಬರಹ ಹಿಂದಿಗಿಂತಲೂ ಸ್ವಲ್ಪ ಪಕ್ವವಾಗಿರಬಹುದು ಅಂತ ನನ್ನ ಅನಿಸಿಕೆ. ಏನೇ ಇರಲಿ ದೀರ್ಘ ಬರಹ ಬರೆಯುವ ತಾಳ್ಮೆ ಇದೀಗ ಇಲ್ಲ...

ಆದರೂ ಕವಿ ಜಿ.ಎಸ್.ಎಸ್‌ರವರ ಹಾಡು ನಕಲು ಮಾಡಿದಂತೆ...
ಎಲ್ಲ ಓದಲಿ ಎಂದು ನಾ ಬರೆಯುವುದಿಲ್ಲ...
ಬರೆಯುವುದು ಅನಿವಾರ್ಯ ಕರ್ಮ ನನಗೆ...!
ಓದುವವರಿಹರೆಂದು ನಾ ಬಲ್ಲೆನದರಿಂದ
ಬರೆಯುವೆನು ಕೈತುಂಬಿ ಎಂದಿನಂತೆ...😁

ಸಾಗರ ಭೂವಿಜ್ಞಾನ ಎಂದರೆ ಅದು ಒಂದು ಬಹುಶಿಸ್ತಿನ ಅಧ್ಯಯನ ವಿಭಾಗ. ಇದು ಪ್ರಮುಖವಾಗಿ ವಿಜ್ಞಾನದ ತಳಹದಿಯಲ್ಲಿ ಬೆಳೆದು ಬಂದಿರುವ ಪ್ರಾಕೃತಿಕ ಜ್ಞಾನ. ನಮ್ಮ ಭೂಮಿಯ ಮೇಲ್ಮೈಯ 71 ಶೇಕಡ ಆವೃತವಾಗಿರುವ ವಿಶಾಲ ಜಲರಾಶಿಯ ಕುರಿತಾದ ಕಲಿಕೆಯೇ ಸಾಗರ ಅಧ್ಯಯನ ಅಥವಾ ಓಶ್ಶಿಯನೋಗ್ರಾಫಿ‌ (Oceanography). ಸಾಗರ ಕೇಂದ್ರೀಕರಿಸಿರುವ ಹಾಗೂ ಪೂರಕವಾದ ಭೂವಿಶೇಷತೆಗಳ ಅಧ್ಯಯನವು ಸಾಗರ ಭೂವಿಜ್ಞಾನವಾಗಿದೆ.

ಸಾಗರ ವಿಜ್ಞಾನ ಕಲಿಕೆಯ ಕೆಲವು ಪ್ರಮುಖ ಉಪವಿಭಾಗಗಳು
  • ರಸಾಯನಿಕ ಸಾಗರ ಶಾಸ್ತ್ರ (Chemical Oceanography)
  • ಭೌತಿಕ ಸಾಗರ ಶಾಸ್ತ್ರ (Physical Oceanography)
  • ಭೌಮಸಾಗರ ಶಾಸ್ತ್ರ (Geological Oceanography)
  • ಜೈವ ಸಾಗರ ಶಾಸ್ತ್ರ (Biological Oceanography)
  • ಶಿಲಾ ಉತ್ಪತ್ತಿ ಶಾಸ್ತ್ರ (Petrology)
  • ಪಳೆಯುಳಿಕೆ ಶಾಸ್ತ್ರ (Palaeontology)
  • ಖನಿಜಶಾಸ್ತ್ರ (Mineralogy)
  • ಭೂರಸಾಯನ ಶಾಸ್ತ್ರ (Geochemistry)
  • ಸ್ಥರ ವಿಜ್ಞಾನ (Stratigraphy)
  • ರಚನಾತ್ಮಕ ಭೂವಿಜ್ಞಾನ (Structural Geology)
  • ಜಲ ಭೂವಿಜ್ಞಾನ (Hydrogeology)
  • ಪರಿಸರ ಭೂವಿಜ್ಞಾನ (Environmental Geology)
  • ಹವಾಮಾನ ಶಾಸ್ತ್ರ (Climatology & Meteorology)
  • ದೂರಸಂವೇದನೆ ಹಾಗೂ ಫೋಟೋಗ್ರಾಮೆಟ್ರಿ (Remote Sensing & Photogrammetry)
  • ಭೂಸಂಖ್ಯಾ ಶಾಸ್ತ್ರ (Geostatistics)
  • ಭೂಸ್ವರೂಪ ಶಾಸ್ತ್ರ (Geomorphology)
  • ಭೂಚಲನ ಶಾಸ್ತ್ರ (Geodynamics)
  • ಆರ್ಥಿಕ ಭೂವಿಜ್ಞಾನ (Economic Geology)
  • ಗಣಿ ಭೂವಿಜ್ಞಾನ (Mining Geology)
  • ಅನ್ವೇಷಣಾ ಭೂವಿಜ್ಞಾನ (Exploration Geology)
  • ಅಭಿಯಂತ್ರಣ ಭೂವಿಜ್ಞಾನ (Engineering Geology)
  • ಭೂವಿಜ್ಞಾನ ಮಾಹಿತಿ ವ್ಯವಸ್ಥೆ ಮತ್ತು ಜಾಗತಿಕ ಸ್ಥಾನಾಂತರ ವ್ಯವಸ್ಥೆ (GIS & GPS)

    ಸಾಗರದ ಕುರಿತಾದ ಕಲಿಕೆಯು ಸಾಗರಕ್ಕಿಂತಲೂ ವಿಸ್ತಾರವಾದುದು. ಬಹುಶಃ ಲಕ್ಷಗಟ್ಟಲೆ ಕಿಲೋಮೀಟರ್‌ ದೂರದ ಚಂದ್ರ, ಮಂಗಳ ಗ್ರಹ ಅಥವಾ ಕೋಟಿಗಟ್ಟಲೆ ದೂರದ ಸೂರ್ಯನೂ ವಿಜ್ಞಾನದ ಕಪಿಮುಷ್ಟಿಯ ಸನಿಹಕ್ಕೆ ಬರುತ್ತಿದ್ದರೆ, ಗರಿಷ್ಟವೆಂದರೆ 12 ಕಿಲೋಮೀಟರ್‌ ಆಳದ ಅಥವಾ ಸರಾಸರಿ 4 ಕಿಲೋಮೀಟರ್‌ ಮಾತ್ರ ಆಳವಿರುವ ಸಾಗರದ ಅಧ್ಯಯನವು ಇಂದಿಗೂ ಸವಾಲಾಗಿದೆ. ಸಾಗರದ ರಹಸ್ಯಗಳೆಡೆಗಿನ ಕುತೂಹಲಿ ಮಾನವನ ಪ್ರಯಾಣದ ವೇಗ ಹೆಚ್ಚಿದಂತೆ ಸಾಗರದ ವಿಜ್ಞಾನ ಮತ್ತಷ್ಟೂ ಜಟಿಲವಾಗುತ್ತಾ ಸಾಗುತ್ತದೆ. ಭೂಮಿಯ ಕೇವಲ 29 ಶೇಕಡ ಭೂಭಾಗದಲ್ಲಿ ನೆಲೆಸಿರುವ ಮಾನವನ ಸುಸ್ಥಿರ ಬೆಳವಣಿಗೆಯಲ್ಲಿ ಸಾಗರವು ತುಂಬಾ ಸಹಕಾರಿ ಅಥವಾ ಅಗತ್ಯ ಎಂಬ ಭಾವನೆಯು ವಿಜ್ಞಾನಲೋಕವನ್ನು ಸಾಗರ ಸಂಶೋಧನೆಯೆಡೆಗೆ ಆಕರ್ಷಿಸುತ್ತದೆ. 
    ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಬರೆಯಲು ಮನಸ್ಸಿನ ಮರ್ಕಟ ಅನುಮತಿ ನೀಡಲಿ...
ಶುಭ ವಿದಾಯ..!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ